ಬೆಂಗಳೂರು:ವಿದ್ಯುಚ್ಛಕ್ತಿ ಇಲಾಖೆಯವರು ಯದ್ವಾತದ್ವಾ ವಿದ್ಯುತ್ ದರ ಏರಿಕೆ ಮಾಡಿ ಜನರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ. ಸರ್ಕಾರ ಕೂಡಲೇ ಇತ್ತ ಗಮನ ಹರಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಜಯನಗರ ವಿಧಾನಸಭೆ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ದಿನಸಿ ಹಾಗೂ ತರಕಾರಿ ಕಿಟ್‌ಗಳನ್ನು ವಿತರಿಸಿದ ಸಂದರ್ಭ ದುಬಾರಿ ವಿದ್ಯುತ್ ಬಿಲ್, ಕೇಂದ್ರ ಸರ್ಕಾರದ ಪ್ಯಾಕೇಜ್ ಕುರಿತು ಪ್ರತಿಕ್ರಿಯೆ ನೀಡಿ, ಮೊದಲೇ ಜನ ಸಂಕಷ್ಟದಲ್ಲಿದ್ದಾರೆ. ಇದು ದೊಡ್ಡ ಹೊರೆಯಾಗಲಿದೆ ಎಂದ್ರು.
ಜನ ಕಷ್ಟದಲ್ಲಿದ್ದಾರೆ, ಎಲ್ಲಿಂದ ಹಣ ತರಲು ಸಾಧ್ಯ. ಸರ್ಕಾರ ಕೂಡಲೇ ಸಮಸ್ಯೆ ಸರಿಪಡಿಸಬೇಕು. ಎರಡು, ಮೂರು, ನಾಲ್ಕು ಪಟ್ಟು ಹೆಚ್ಚು ವಿದ್ಯುತ್ ಬಿಲ್ ಬಂದಿದೆ. ಇದು ಬಿಲ್ ಹೆಚ್ಚಿಸುವ ಕಾಲ ಅಲ್ಲ. ಇದುವರೆಗೂ ನಾವು ಕೋವಿಡ್ ಹಿನ್ನೆಲೆ ಸರ್ಕಾರಕ್ಕೆ ಸಹಕಾರ ನೀಡುತ್ತಾ ಬಂದಿದ್ದೆವು. ಇದೀಗ ಬೀದಿಗಿಳಿದು ಹೋರಾಡುವ ಸಮಯ ಬಂದಿದೆ ಎಂದು ಹೇಳಿದರು.