ಬೆಂಗಳೂರು: ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆ ಬಿಜೆಪಿಯವರ ಕಣ್ಣೊರೆಸುವ ತಂತ್ರವಷ್ಟೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗಮೋಹನ್ ದಾಸ್ ಕಮಿಟಿ ಮಾಡಿದ್ದು ನಮ್ಮ ಸರ್ಕಾರ. ವರದಿ ಬಂದು ಎಷ್ಟು ಸಮಯ ಆಯ್ತು. ಇವರಿಗೆ ಮೀಸಲಾತಿ ಕೊಡಬೇಕು ಎಂಬ ಇಚ್ಛೆ ಇದ್ದಿದ್ದರೆ ವರದಿ ಸಿಕ್ಕಿದ ಕೂಡಲೇ ಜಾರಿಗೆ ತರಬಹುದಿತ್ತು. ಈಗ ಯಾಕೆ ತರಾತುರಿಯಲ್ಲಿ ಸುಗ್ರೀವಾಜ್ಞೆ ತಂದರು ಎಂದು ಪ್ರಶ್ನಿಸಿದರು.
ಎಸ್ಸಿ, ಎಸ್ಟಿ ಮೀಸಲಾತಿ ಸುಗ್ರೀವಾಜ್ಞೆ ಬಿಜೆಪಿಯವರ ಕಣ್ಣೊರೆಸುವ ತಂತ್ರ ನಾವು ವರದಿ ಜಾರಿಗೆ ಒತ್ತಾಯ ಮಾಡಿದ್ದೆವು. ಸದನದಲ್ಲಿ ನಿರಂತರವಾಗಿ ಒತ್ತಾಯ ಮಾಡಿದ್ದೆವು. ಈಗ ಸುಗ್ರೀವಾಜ್ಞೆ ಹೊರಡಿಸಿದ್ದಾರೆ. ಇದರ ಬದಲು ವಿಶೇಷ ಅಧಿವೇಶನ ಕರೆಯಬೇಕಿತ್ತು. ಅಧಿವೇಶನ ಕರೆದು ಬಿಲ್ ಪಾಸ್ ಮಾಡಬೇಕಿತ್ತು. ಕೇಂದ್ರದಲ್ಲಿ ಇವರದ್ದೇ ಸರ್ಕಾರ ಇದೆ. ಶೆಡ್ಯೂಲ್ 9ಗೆ ಸೇರಿಸಬೇಕಲ್ಲವೇ?. ಇವರು ಸಾಮಾಜಿಕ ನ್ಯಾಯದ ಪರವಾಗಿಲ್ಲ. ನಮ್ಮ ಹೋರಾಟದ ಫಲವಾಗಿ ನ್ಯಾಯ ಸಿಕ್ಕಿದೆ ಎಂದರು.
ನಾಳೆ ನವದೆಹಲಿಯಲ್ಲಿ ನಡೆಯಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಇಂದು ದೆಹಲಿಗೆ ಪಯಣ ಬೆಳೆಸಿದರು.
ಇದನ್ನೂ ಓದಿ :ಬಹುನಿರೀಕ್ಷಿತ ಎಸ್ಸಿ ಎಸ್ಟಿ ಮೀಸಲು ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ, ಅಧಿಸೂಚನೆ ಹೊರಡಿಸಿದ ಸರ್ಕಾರ