ಬೆಂಗಳೂರು: ರಾಷ್ಟ್ರಧ್ವಜ ಸಲುವಾಗಿವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕೇಳಿರುವ ಪ್ರಶ್ನೆಗಳು ಹೀಗಿವೆ.
ಸ್ವತಂತ್ರ ಭಾರತದಲ್ಲಿ 52 ವರ್ಷಗಳವರೆಗೆ ದೇಶ ಹೆಮ್ಮೆ ಪಡುವ ರಾಷ್ಟ್ರಧ್ವಜವನ್ನು ಆರ್ಎಸ್ಎಸ್ ಕಚೇರಿ ಮೇಲೆ ಹಾರಿಸದೇ ಇರಲು ಕಾರಣವೇನು? 2001ರಲ್ಲಿ ದೇಶಭಕ್ತ ಯುವಕರು ರಾಷ್ಟ್ರಧ‍್ವಜ ಹಾರಿಸಲು ಬಂದಾಗ ಅವರನ್ನು ಹಿಡಿದು ಪೊಲೀಸರಿಗೆ ಕೊಟ್ಟಿರುವುದು ಏಕೆ?.
ದೇಶಕ್ಕೆ ತ್ರಿವರ್ಣ ಧ್ವಜ ಅಲ್ಲ ಭಗವಾಧ‍್ವಜವೇ ಇರಬೇಕು ಎಂದು ಪ್ರತಿಪಾದಿಸುತ್ತಿದ್ದ ಆರ್ಎಸ್ಎಸ್ ಸರಸಂಘಚಾಲಕರಾದ ಕೆ.ಬಿ.ಹೆಡಗೆವಾರ್, ಎಂ.ಎಸ್ ಗೋಲ್ವಾಲ್ಕರ್ ಅವರ ನಿಲುವಿನ ಬಗ್ಗೆ ನಿಮ್ಮ ಮತ್ತು ನಿಮ್ಮ ಪಕ್ಷದ ಈಗಿನ ಅಭಿಪ್ರಾಯವೇನು?. ತ್ರಿವರ್ಣ ಧ್ವಜ ರಾಷ್ಟ್ರೀಯ ಮುನ್ನೋಟ, ಸತ್ಯ, ಇತಿಹಾಸ ಇಲ್ಲವೇ ಪರಂಪರೆಯಿಂದ ಪ್ರೇರಣೆ ಪಡೆದು ತಯಾರಿಸಿದ್ದಲ್ಲ, ಇದು ಫ್ರೆಂಚ್ ಕ್ರಾಂತಿಯ ಘೋಷಣೆಗಳ ಎರವಲು ಎಂದು ಆರ್ಎಸ್ಎಸ್ ಸರಸಂಘಚಾಲಕ ಗೋಲ್ವಾಲ್ಕರ್ ತಮ್ಮ 'ಬಂಚ್ ಆಫ್ ಥಾಟ್ಸ್' ನಲ್ಲಿ ಹೇಳಿರುವುದನ್ನು ನೀವು ಧಿಕ್ಕರಿಸುತ್ತೀರಾ?.
ತ್ರಿವರ್ಣ ಧ್ವಜ ಎನ್ನುವುದು ಫ್ರೆಂಚ್ ಕ್ರಾಂತಿಯ ಘೋಷಣೆಗಳಾದ ಸ್ವಾತಂತ್ರ್ಯ, ಸಮಾನತೆ, ಮತ್ತು ಭಾತೃತ್ವದ ಬಗೆಗಿನ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಗೀಳಿನಿಂದ ಹುಟ್ಟು ಪಡೆದಿರುವುದು” ಎಂದು ಗೋಲ್ವಾಲ್ಕರ್ ಹೇಳಿರುವುದನ್ನು ಈಗಲೂ ನೀವು ಒಪ್ಪುವಿರಾ?. ರಾಷ್ಟ್ರಧ್ವಜವನ್ನು ಭಾರತೀಯರು ಒಪ್ಪಲಾರರು, ಮೂರು ಎನ್ನುವುದೇ ಅಪಶಕುನ. ತ್ರಿವರ್ಣಧ್ವಜ ಖಂಡಿತ ದೇಶದ ಮೇಲೆ ಮಾನಸಿಕವಾಗಿ ದುಷ್ಪರಿಣಾಮವನ್ನು ಬೀರಲಿರುವುದು ಮಾತ್ರವಲ್ಲ ಹಾನಿಕಾರಿಯಾಗಬಹುದು ಎಂದು 1947ರಲ್ಲಿಯೇ ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ ಪ್ರಕಟಿಸಿದ್ದ ಲೇಖನವನ್ನು ನೀವು ಒಪ್ಪುವಿರಾ?.