ಬೆಂಗಳೂರು :ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರೈತರು, ಕಾರ್ಮಿಕರ ತಿದ್ದುಪಡಿ ಕಾಯ್ದೆಗಳನ್ನ ರದ್ದುಪಡಿಸಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗು ಸುಗ್ರೀವಾಜ್ಞೆ ಮೂಲಕ ರೈತ ಹಾಗೂ ಕಾರ್ಮಿಕ ತಿದ್ದುಪಡಿ ಕಾಯ್ದೆಗಳ ವಿರೋಧಿ ನೀತಿ ಖಂಡಿಸಿ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಈಗಾಗಲೇ ಬೆಂಬಲ ನೀಡಿದೆ. ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಹಾಗೂ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದಾಗ ಸಂಬಂಧಪಟ್ಟ ಮುಖಂಡರೊಂದಿಗೆ ಸಭೆ ನಡೆಸಿದ್ದೆ.
ಹೋರಾಟ ಮಾಡಬೇಕೆಂದು ನಿರ್ಧರಿಸಿದ್ದೆ. ದುದೈರ್ವ ಅಂದರೆ ನನಗೆ ಕೊರೊನಾ ಬಂದಿದ್ದರಿಂದ ಅನಿವಾರ್ಯವಾಗಿ ಒಂದು ತಿಂಗಳು ಮನೆಯಲ್ಲೇ ಉಳಿಯುವಂತಾಗಿತು ಎಂದು ಬೇಸರ ವ್ಯಕ್ತಪಡಿಸಿದರು. ಇಡೀ ದೇಶದಲ್ಲಿ ರೈತರ ಹೋರಾಟ ಪ್ರಾರಂಭವಾಗಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ,ಭೂ ಸುಧಾರಣೆ, ಕಾರ್ಮಿಕ ಕಾಯ್ದೆ ಜನ ವಿರೋಧಿ ಕಾಯ್ದೆಗಳಾಗಿವೆ.
ರೈತ,ಕಾರ್ಮಿಕ, ದಲಿತ ಮೂರು ಜನ ಇಲ್ಲಿದ್ದೇವೆ. ನಾನು ಕೂಡ ರೈತನ ಮಗ. ರೈತ ಸಂಘಟನೆ ಚಳವಳಿಯಲ್ಲಿ ಭಾಗಿಯಾಗಿದ್ದೆ. ಚುನಾವಣೆಗೆ ಅವಕಾಶ ಇಲ್ಲದ ಕಾರಣ ನಾನು ಹೊರಬಂದೆ. ಆದರೆ, ನಾನು ಯಾವಾಗಲೂ ರೈತರ ಪರವಾಗಿಯೇ ಇರುತ್ತೇನೆ.
ಕೇವಲ ಚುನಾವಣೆ ಅಂತಾ ಬರಲಿಲ್ಲ. ನಿಮ್ಮ ಹೋರಾಟದಲ್ಲಿ ನಮ್ಮ ಬೆಂಬಲವಿದೆ. ನಾವು ಮುಂದೆ ಅಧಿಕಾರಕ್ಕೆ ಬಂದ್ರೆ ಈಗ ತಂದಿರುವ ಮೂರು ಕಾಯ್ದೆ ಕೈಬಿಡುತ್ತೇನೆ. ಇದು ಸತ್ಯ, ನಾನು ನನ್ನ ಮಾತಿಗೆ ಬದ್ಧವಾಗಿರುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಓದಿ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರ!!
ರೈತರ ಭೂಮಿ ರೈತರ ಬಳಿ ಇರಬೇಕು. ಅದನ್ನು ಹಣವಂತರಿಗೆ ಮಾರಲು ಹೊರಟಿದ್ದಾರೆ. ಕುಮಾರಸ್ವಾಮಿ ಬಳಿ ಬೇನಾಮಿ ಜಮೀನಿದೆ. ಅದನ್ನು ಉಳಿಸಿಕೊಳ್ಳಲು ಭೂ ಸುಧಾರಣೆ ಕಾಯ್ದೆ ಪರ ಇದ್ದಾರೆ. ಅವರ ಭೂಮಿ ಮೇಲಿರುವ ಎಲ್ಲಾ ಕೇಸ್ ಸರ್ಕಾರ ವಜಾ ಮಾಡಿದೆ. ಹೀಗಾಗಿ ಸರ್ಕಾರದ ಪರ ಕುಮಾರಸ್ವಾಮಿ ಇದ್ದಾರೆ. ಅವರಿಗೆ ನಾಚಿಕೆಯಾಗಬೇಕು.
ಯಡಿಯೂರಪ್ಪ ಮೂರು ಸಾರಿ ಸಿಎಂ ಆಗಿದ್ದಾರೆ. ಮೂರು ಬಾರಿ ಹಸಿರು ಶಾಲು ಹಾಕಿ ಪ್ರಮಾಣ ಮಾಡಿದ್ದಾರೆ. ಆದರೆ, ಇವತ್ತು ಅವರು ರೈತರಿಗೆ ದ್ರೊಹ ಮಾಡುತ್ತಿದ್ದಾರೆ. ಎಪಿಎಂಸಿ ಕೇಂದ್ರ ಸರ್ಕಾರದ ಬಿಲ್ ಆಗಿದೆ. ಕಾರ್ಪೊರೇಟ್ ಕಂಪನಿಯ ಪರವಾಗಿರುವ ಬಿಲ್ ಇದಾಗಿದ್ದು, ಅದನ್ನು ರಾಜ್ಯದ ಮೇಲೆ ಕೇಂದ್ರ ಸರ್ಕಾರ ಹೇರಿದೆ.
ಇಡೀ ರಾಜ್ಯದಲ್ಲಿ ಈ ಹೋರಾಟ ನಿಲ್ಲಬಾರದು. ಒಂದು ನಿಮ್ಮ ಜೊತೆಗೆ ನಾವು ಬರುತ್ತೇವೆ. ಇಲ್ಲಾ ನಮ್ಮ ಜೊತೆಗೆ ನೀವು ಬನ್ನಿ, ಇಬ್ಬರು ಸೇರಿ ಹೋರಾಟ ಮಾಡೋಣ ಎಂದರು. ಜೆಡಿಎಸ್ ಇಬ್ಬಂದಿತನ ನೀತಿ ಅನುಸರಿಸುತ್ತಿದೆ. ಡಬ್ಬಲ್ ಸ್ಟ್ಯಾಂಡರ್ಡ್ ಭೂ ಸುಧಾರಣಾ ಕಾಯ್ದೆಯನ್ನ ಸುಮ್ನೆ ಮಾಡಿದ್ದಾರಾ?,ಯಡಿಯೂರಪ್ಪ ಸುಮ್ನೆ ಮಾಡ್ ಬಿಟ್ನಾ? ಅಶೋಕ್ ಸುಮ್ನೆ ಮಾಡ್ ಬಿಟ್ನಾ? ಕೋಟಿ ಕೋಟಿ ಲೂಟಿ ಮಾಡಿದಾರೆ. ಕುಮಾರಸ್ವಾಮಿ ನಿನಗೆ ನಾಚಿಕೆ ಆಗಲ್ವಾ? ಜನರ ದಾರಿ ತಪ್ಪಿಸ್ತಿರೋ ನೀವು ಮಣ್ಣಿನ ಮಕ್ಕಳಂತೆ, ನಾವೆಲ್ಲ ಯಾರ ಮಕ್ಳು? ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.