ಬೆಂಗಳೂರು :ಕೊರೊನಾ ಹಿನ್ನೆಲೆ ಸರ್ಕಾರ ಈ ಕೂಡಲೇ ಸರ್ವಪಕ್ಷಗಳ ಸಭೆಯನ್ನು ಕರೆಯಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸಂಬಂಧ ಪ್ರತಿಪಕ್ಷವನ್ನು ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಸಿಎಂ ಕೂಡಲೇ ಸರ್ವಪಕ್ಷಗಳ ಸಭೆ ಕರೆಯಬೇಕು. ಈ ನಿಟ್ಟಿನಲ್ಲಿ ಯಾವುದೇ ವಿಳಂಬವಾಗಬಾರದು, ಕೊರೊನಾ ನಿಭಾಯಿಸುವಲ್ಲಿನ ನ್ಯೂನ್ಯತೆಗಳನ್ನು ಸರ್ಕಾರದ ಗಮನಕ್ಕೆ ತರಬೇಕಾಗಿದೆ. ಕೊರೊನಾ ನಿರ್ವಹಣೆಗಾಗಿ ನಮ್ಮ ಸಂಪೂರ್ಣ ಸಹಕಾರವನ್ನು ನೀಡುತ್ತೇವೆ ಎಂದರು.
ಕೊರೊನಾ ತಡೆಗೆ ಸರ್ಕಾರಕ್ಕೆ ಸಹಕಾರ ನೀಡ್ತೀವಿ ಅಂದರು ಮಾಜಿ ಸಿಎಂ ಸಿದ್ದರಾಮಯ್ಯ.. ಇಂದಿರಾ ಕ್ಯಾಂಟೀನ್ ಮುಚ್ಚಬೇಡಿ, ಅದರ ಮೂಲಕ ವಲಸಿಗರಿಗೆ, ವಿದ್ಯಾರ್ಥಿಗಳಿಗೆ ಆಹಾರ ಪೂರೈಕೆ ಮಾಡಬೇಕು. ಜೊತೆಗೆ ಕೇಂದ್ರ ಸರ್ಕಾರ ಘೋಷಿಸಿರುವ ಉಚಿತ ಆಹಾರ ಧಾನ್ಯವನ್ನು ಈ ಕೂಡಲೇ ಅನುಷ್ಠಾನಗೊಳಿಸಬೇಕು. ಪ್ರತಿಯೊಬ್ಬರ ಮನೆಗಳಿಗೂ ಆಹಾರ ಧಾನ್ಯಗಳ ಪೂರೈಕೆ ವ್ಯವಸ್ಥೆ ಮಾಡಬೇಕಾದ ಅಗತ್ಯವಿದೆ ಎಂದರು.
ಬಹುತೇಕ ಕಡೆ ಮಾಸ್ಕ್, ಸ್ಯಾನಿಟೈಸರ್, ವೆಂಟಿಲೇಟರ್‌ಗಳ ಕೊರತೆ ಇದೆ. ಅವುಗಳನ್ನು ಆದ್ಯತೆ ಮೇರೆಗೆ ಪೂರೈಸಲು ಕ್ರಮಕೈಗೊಳ್ಳಬೇಕು. ಜಿಲ್ಲೆಗೊಂದು ಟೆಸ್ಟಿಂಗ್ ಲ್ಯಾಬ್‌ಗಳನ್ನು ತೆರೆಯಬೇಕಾಗಿದೆ. ಜೊತೆಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕ್ವಾರೆಂಟೈನ್ ಕೇಂದ್ರಗಳನ್ನು ಪ್ರಾರಂಭಿಸಬೇಕು. ಸುಮಾರು 200/300 ಬೆಡ್ ಮತ್ತು ಪ್ರತ್ಯೇಕ ನಿಗಾ ವಾರ್ಡ್‌ಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ನಂಜನಗೂಡಿನಲ್ಲಿ ಸೆಕ್ಯೂರಿಟಿ ಗಾರ್ಡ್‌ಗೆ ಸೋಂಕು ಹೇಗೆ ಬಂದಿದೆ ಗೊತ್ತಿಲ್ಲ. ಅವನು ಮೈಸೂರಿನಲ್ಲಿ ಹಲವರ ಜೊತೆಗೆ ಸಂಪರ್ಕದಲ್ಲಿದ್ದ. ಇವರುಗಳನ್ನು ಐಸೋಲೇಷನ್ ಇಡಬೇಕು, ಜೊತೆಗೆ ವಿದೇಶದಿಂದ ಬಂದವರನ್ನೂ ಐಸೋಲೇಷನ್‌ನಲ್ಲಿರಿಸಬೇಕು. ನಮ್ಮ ಕಾರ್ಯಕರ್ತರು ಎಲ್ಲೂ ಸಾರ್ವಜನಿಕರ ಬಳಿ ಹೋಗಿ ವಂತಿಕೆ ಸಂಗ್ರಹ ಮಾಡಬಾರದು. ಯಾರೇ ಕೊಡುವುದಿದ್ರೆ ಕೆಪಿಸಿಸಿಗೆ ಬಂದು ದೇಣಿಗೆ ಕೊಡಬೇಕು. ಬಂದ ಹಣವನ್ನು ಹೇಗೆ ವಿನಿಯೋಗ ಮಾಡಬೇಕು ಅನ್ನೋದನ್ನೂ ತಿಳಿಸುತ್ತೇವೆ ಎಂದರು.