ಬೆಂಗಳೂರು : ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಹಿರಿಯ ಸಮಾಜವಾದಿ ಸಿದ್ಧಾಂತದ ನಾಯಕ ಸಿದ್ದರಾಮಯ್ಯ ಸಿದ್ಧರಾಗಿದ್ದಾರೆ. ನಾಲ್ಕು ದಶಕದ ರಾಜಕಾರಣದಲ್ಲಿ ಎರಡು ಬಾರಿ ಡಿಸಿಎಂ, ಎರಡು ಬಾರಿ ಸಿಎಂ, ಎರಡು ಬಾರಿ ಪ್ರತಿಪಕ್ಷ ನಾಯಕ ಹಾಗು ಐವರು ಮುಖ್ಯಮಂತ್ರಿಗಳ ಸಂಪುಟದಲ್ಲಿ ಕೆಲಸ ಮಾಡಿದ ಅಪರೂಪದ ರಾಜಕಾರಣಿಯಾಗಿದ್ದಾರೆ. ಈವರೆಗೂ ಸಾಂವಿಧಾನಿಕ ಹುದ್ದೆಯಿಂದ ದೂರ ಉಳಿದದ್ದು, ಕೇವಲ ಎರಡು ಬಾರಿ ಮಾತ್ರ ಎನ್ನುವುದು ವಿಶೇಷ. ಈ ಕುರಿತ ವರದಿ ಇಲ್ಲಿದೆ.
ಮೊದಲ ಬಾರಿ ವಿಧಾನಸಭೆ ಪ್ರವೇಶ ಮಾಡಿದಂದಿನಿಂದ ಇಲ್ಲಿಯವರೆಗಿನ 40 ವರ್ಷದ ರಾಜಕೀಯ ಪಯಣದಲ್ಲಿ ಸಿದ್ದರಾಮಯ್ಯ ಅಧಿಕಾರದಿಂದ ದೂರ ಇದ್ದದ್ದು ಕೇವಲ ಎರಡು ಬಾರಿ ಮಾತ್ರ. ಅದು ಕೂಡ ಅವರು ಸೋತ ಕಾರಣದಿಂದಾಗಿ 1989 ಮತ್ತು 1999 ರಲ್ಲಿ ಎರಡು ಬಾರಿ ಯಾವುದೇ ಅಧಿಕಾರ ಇಲ್ಲದೆ ಇದ್ದರು. ಇನ್ನುಳಿದಂತೆ ಪ್ರತಿ ಬಾರಿಯೂ ಒಂದಲ್ಲಾ ಒಂದು ಸಾಂವಿಧಾನಿಕ ಹುದ್ದೆಯಲ್ಲಿಯೇ ಇದ್ದುಕೊಂಡು ರಾಜಕಾರಣ ಮಾಡಿಕೊಂಡು ಬಂದಿದ್ದಾರೆ.
ಕಾಂಗ್ರೆಸ್ನಿಂದಲೇ ಎರಡನೇ ಬಾರಿ ಸಿಎಂ: 1983ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಲೋಕದಳ ಅಭ್ಯರ್ಥಿಯಾಗಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆಯಾಗುತ್ತಾರೆ. ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚನೆಗೆ ಬೆಂಬಲ ನೀಡಲು ರಾಮಕೃಷ್ಣ ಹೆಗಡೆ ಸರ್ಕಾರವನ್ನು ಬೆಂಬಲಿಸಿ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗುತ್ತಾರೆ. ಇದು ಕೂಡ ಒಂದು ರೀತಿಯಲ್ಲಿ ಸಿದ್ದರಾಮಯ್ಯ ಅವರ ಆರಂಭಿಕ ಅಧಿಕಾರ ಎನ್ನಬಹುದಾಗಿದೆ. ಮೊದಲ ಕಾಂಗ್ರೆಸ್ಸೇತರ ಸರ್ಕಾರ ರಚನೆಗೆ ಬೆಂಬಲಿಸಿದ್ದ ಸಿದ್ದರಾಮಯ್ಯ ಇಂದು ಕಾಂಗ್ರೆಸ್ ನಿಂದಲೇ ಎರಡನೇ ಬಾರಿ ಸಿಎಂ ಆಗುತ್ತಿರುವುದು ವಿಶೇಷ.
ಹೆಚ್ ಡಿ ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವ:ಇನ್ನು 1985ರಲ್ಲಿ ಎರಡನೇ ಬಾರಿಗೆ ಜನತಾ ಪಕ್ಷದಿಂದ ಸ್ಪರ್ಧಿಸಿ ವಿಧಾನಸಭೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. ರಾಮಕೃಷ್ಣ ಹೆಗಡೆ ಸಂಪುಟ ಹಾಗು ಎಸ್ ಆರ್ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗುತ್ತಾರೆ. 1989 ರಲ್ಲಿ ಮೊದಲ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿ ಅಧಿಕಾರದಿಂದ ದೂರ ಉಳಿಯುತ್ತಾರೆ. ಆದರೆ 1994 ರಲ್ಲಿ ಜನತಾದಳದಿಂದ ಗೆದ್ದು ಹೆಚ್.ಡಿ ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾಗುತ್ತಾರೆ. ದೇವೇಗೌಡರು ಪ್ರಧಾನಿಯಾದ ನಂತರ ಜೆ. ಹೆಚ್ ಪಟೇಲ್ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಪಟೇಲ್ ಸಂಪುಟದಲ್ಲಿ ಉಪ ಮುಖ್ಯಮಂತ್ರಿಯಾದರು. 1999 ರಲ್ಲಿ ಎರಡನೇ ಬಾರಿಗೆ ಸೋತು ಅಧಿಕಾರದಿಂದ ಮತ್ತೆ ದೂರ ಉಳಿದರು.
2004ರಲ್ಲಿ ಜೆಡಿಎಸ್ನಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎರಡನೇ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. ಆದರೆ ಬದಲಾದ ರಾಜಕೀಯ ವಿದ್ಯಮಾನಗಳಿಂದಾಗಿ 2006 ರಲ್ಲಿ ಡಿಸಿಎಂ ಸ್ಥಾನ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ತೊರೆದು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಪ ಚುನಾವಣೆಯಲ್ಲಿ ನಿಂತು ಗೆದ್ದರು.