ಬೆಂಗಳೂರು:ಈ ದಿನವನ್ನು ನೋಟು ನಿಷೇಧಗೊಂಡ ದಿನ ಎನ್ನುವುದಕ್ಕಿಂತ, ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಕಸಿದುಕೊಂಡ ದಿನವೆನ್ನುವುದೇ ಸೂಕ್ತ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸರಣಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ನೋಟ್ಯಂತರ ನಿರ್ಧಾರದ ವಿರುದ್ಧ ಹರಿಹಾಯ್ದಿರುವ ಸಿದ್ದರಾಮಯ್ಯ, ಅಂದು ಬ್ಯಾಂಕುಗಳ ಮುಂದಿನ ಸರತಿ ಸಾಲಿನಲ್ಲಿ ಆರಂಭಗೊಂಡ ಸಾವಿನ ಸರಪಳಿ ಇಂದಿಗೂ ಜನರ ವ್ಯಾಪಾರ, ಉದ್ಯೋಗವನ್ನು ಕಸಿದುಕೊಳ್ಳುತ್ತಾ ಬಡ ಜನರ ಬಲಿ ಪಡೆಯುತ್ತಲೇ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸರಿಯಾದ ಪೂರ್ವ ತಯಾರಿಯಿಲ್ಲದ ನೋಟು ನಿಷೇಧದಿಂದಾಗಿ ಇದುವರೆಗೂ ದೇಶದಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ದೇಶದ ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ಉದ್ಯೋಗ ಸೃಷ್ಟಿಸಬೇಕಿದ್ದ ಸರ್ಕಾರ ಯುವ ಜನರಿಗೆ ಪಕೋಡಾ ಮಾರುವಂತೆ ಸಲಹೆ ನೀಡಿರುವುದು ದೊಡ್ಡ ದುರಂತ ಎಂದು ಕಿಡಿ ಕಾರಿದ್ದಾರೆ.
ನೋಟು ನಿಷೇಧದ ನಂತರ ಇಳಿಕೆಯ ಹಾದಿ ಹಿಡಿದಿದ್ದ ದೇಶದ ಜಿಡಿಪಿ ದರ ಈಗ ಕೋಮಾ ಸ್ಥಿತಿಯಲ್ಲಿದೆ. ಪ್ರಸಕ್ತ ವರ್ಷದ ಜಿಡಿಪಿ ಶೇ.5 ರಷ್ಟಿದ್ದು, ಇದು ಹಿಂದಿನ 7 ವರ್ಷಗಳಲ್ಲೇ ಅತ್ಯಂತ ಕನಿಷ್ಠದ್ದಾಗಿದೆ. ದೇಶದ ವಿತ್ತ ಸಚಿವರ ಪತಿಯೇ ಸರ್ಕಾರದ ಆಡಳಿತ ನೀತಿಗಳ ವೈಫಲ್ಯ ಕುರಿತು ಲೇಖನ ಬರೆದಿರುವುದು ಗಮನಾರ್ಹ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯಕ್ಕೆ ಅಧಿಕಾರಿಗಳನ್ನು ಹೊಣೆ ಮಾಡುವ ನರೇಂದ್ರ ಮೋದಿಯವರು, ಬಾಲಾಕೋಟ್ ದಾಳಿಯ ಶ್ರೇಯವನ್ನು ಮಾತ್ರ ತಮ್ಮದೇ ಸಾಧನೆ ಎಂಬಂತೆ ಬಿಂಬಿಸಿಕೊಂಡಿದ್ದು ವಿಪರ್ಯಾಸ. ರಿಸರ್ವ್ ಬ್ಯಾಂಕಿನ ಅನುಮತಿಯಿಲ್ಲದೇ ಸರ್ಕಾರ ನೋಟು ನಿಷೇಧಿಸಿದ್ದರಿಂದ ಆದ ಅನಾಹುತಗಳಿಗೆ ಹೊಣೆ ಯಾರು? ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.