ಬೆಂಗಳೂರು:ಡಿನೋಟಿಫಿಕೇಷನ್ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವುದು ಸರಿಯೇ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗಣಿ ಸಚಿವ ಮುರುಗೇಶ್ ನಿರಾಣಿ ಅವರ ವಿರುದ್ಧ ಆರೋಪಗಳಿವೆ. ಈ ಸಂಬಂಧ ಹೈಕೋರ್ಟ್ ನೀಡಿದ ತೀರ್ಪನ್ನು ವಜಾ ಮಾಡುವಂತೆ ಇಬ್ಬರೂ ಸುಪ್ರೀಂಕೋರ್ಟ್ಗೆ ಹೋದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿದೆ ಎಂದರು.
ಹೀಗಾಗಿ ನಾಳೆ ಅವರ ಬಂಧನವಾಗಬಹುದು. ಹಾಗಾಗದಂತೆ ಸುಪ್ರೀಂಕೋರ್ಟ್ ನೀಡಿದ್ದರೂ ಇದರ ಆಧಾರದ ಮೇಲೆ ಹೊರಗಿರುವ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವೇ ಎಂದು ಪ್ರಶ್ನಿಸಿದಾಗ ಸದನದಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ್ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಶಾಸಕರಾದ ಬೋಪಯ್ಯ ದನಿಗೂಡಿಸಿದರು. ಈ ಹಂತದಲ್ಲಿ ಸಿದ್ದರಾಮಯ್ಯ ಬೆಂಬಲಕ್ಕೆ ರಮೇಶ್ ಕುಮಾರ್ ಧಾವಿಸಿ ಪ್ರತಿಪಕ್ಷದ ನಾಯಕರ ಹೇಳಿಕೆ ಸಮರ್ಥಿಸಿಕೊಂಡರು, ಆಗ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅದನ್ನು ವಿರೋಧಿಸಿದರು.
ನಿರೀಕ್ಷಣಾ ಜಾಮೀನು ಬಂದ ಇತಿಹಾಸ ಹೇಳಿದ ರಮೇಶ್ ಕುಮಾರ್:
ಸದ್ಯದ ಸ್ಥಿತಿಯಲ್ಲಿ ಮುಂದಿನ ಸನ್ನಿವೇಶದ ಬಗ್ಗೆ ಮಾತನಾಡುವುದು ಬೇಡ ಎಂದಾಗ ಪುನಃ ಮಾತನಾಡಿದ ರಮೇಶ್ ಕುಮಾರ್, ಕೇಂದ್ರದಲ್ಲಿ ಜನತಾದಳ ಸರ್ಕಾರ ಬರುವವರೆಗೆ ರಾಜಕಾರಣದಲ್ಲಿ ಯಾರೂ ನಿರೀಕ್ಷಣಾ ಜಾಮೀನು ಪಡೆಯುವ ಸ್ಥಿತಿ ಇರಲಿಲ್ಲ ಎಂದು ಹೇಳಿದರು.
ಬಳಿಕ ಸಿದ್ದರಾಮಯ್ಯ ಮಾತನಾಡಿ, ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳು, ಮಂತ್ರಿಗಳಿದ್ದಾರೆ.ಹೀಗಾಗಿ ಇವರು ಮುಂದುವರಿಯುವುದು ನೈತಿಕವಲ್ಲ ಎಂದು ಜನ ಹೇಳುತ್ತಾರೆ. ಹೀಗಾಗಿ ಅದನ್ನು ಪ್ರಸ್ತಾಪಿಸಿದ್ದೇನೆ ಎಂದರು.