ಬೆಂಗಳೂರು: ವಲಸೆ ಕಾರ್ಮಿಕರನ್ನು ಅವರವರ ಗ್ರಾಮಗಳಿಗೆ ಕಳುಹಿಸಿ ಕೊಡಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ನಗರ ರೈಲು ನಿಲ್ದಾಣಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಈ ಸರ್ಕಾರಕ್ಕೆ ಮುಂದಾಲೋಚನೆಯೇ ಇಲ್ಲ, ಇದ್ದಿದ್ದರೆ ಕಾರ್ಮಿಕರ ವಿಚಾರದಲ್ಲಿ ಇಂಥ ಪರಿಸ್ಥಿತಿ ಯಾಕೆ ಬರುತ್ತಿತ್ತು. ಈ ಕುರಿತಂತೆ ಸರ್ಕಾರ ಸ್ವಲ್ಪವೂ ಯೋಚನೆ ಮಾಡಿಲ್ಲ ಎಂದು ಗುಡುಗಿದರು.
ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಬಡವರಿಗಾಗಲಿ, ಕಾರ್ಮಿಕರಿಗಾಗಲಿ ತಲುಪುವುದಿಲ್ಲ. ಹೀಗಾಗಿಯೇ ನಾವು ಇಡೀ ದೇಶದಲ್ಲಿ ಅಭಿಯಾನ ಪ್ರಾರಂಭಿಸಿದ್ದೇವೆ. ವಲಸೆ ಕಾರ್ಮಿಕರಿಗೆ ನೆರವು ನೀಡಿದ್ದೇವೆ. ಮೋದಿ ಸರ್ಕಾರ ಕೊರೊನಾ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಇನ್ನು ಯಲಹಂಕ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇಂದಿರಾ ಗಾಂಧಿ ಪ್ರಧಾನಿಯಾಗಿರಲಿಲ್ವ, ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಅದಕ್ಕಾಗಿ ಕ್ಯಾಂಟೀನ್ಗೆ ಅವರ ಹೆಸರಿಟ್ಟಿದ್ದೇವೆ. ನಮ್ಮ ಕರ್ನಾಟಕದಲ್ಲಿ ಅನೇಕ ವೀರರಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನ ಮಾಡಿದ ಅನೇಕ ಜನರಿದ್ದಾರೆ ಅವರ ಹೆಸರಿಡುವುದನ್ನು ಬಿಟ್ಟು ಬೇರೆಯವರ ಹೆಸರನ್ನು ಯಾಕೆ ಇಡುತ್ತೀರಾ ಎಂದು ಪ್ರಶ್ನಿಸಿದರು.
ಇನ್ನು ಸಿದ್ದಗಂಗಾ ಶ್ರೀಗಳಿಗೆ ಮೊದಲು ಭಾರತ ರತ್ನ ಕೊಡಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು.