ಬೆಂಗಳೂರು:ಕೇಂದ್ರ ಸರ್ಕಾರ ರಾಜ್ಯದ ಪರ ಮಲತಾಯಿ ಧೋರಣೆ ತೋರುತ್ತಿದ್ದು, ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ವಿಧಾನಸಭೆಯಲ್ಲಿ ಅತಿವೃಷ್ಟಿ ವಿಚಾರವಾಗಿ ನಿಯಮ 69ರ ಅಡಿಯಲ್ಲಿ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಅತಿವೃಷ್ಟಿಯಿಂದ 24,941 ಕೋಟಿ ರೂ. ನಷ್ಟವಾಗಿದ್ದು, ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಬಾರಿ ಹಿಂದಿಗಿಂತ ದೊಡ್ಡ ರೀತಿಯ ಪ್ರವಾಹ ಬಂದಿದೆ. ಪ್ರವಾಹದಿಂದ ಮನೆ ಕಳೆದುಕೊಂಡ ಇನ್ನೂ ಹಲವು ಮಂದಿಗೆ ಪರಿಹಾರ ಸಿಕ್ಕಿಲ್ಲ. 2020ರಲ್ಲಿ ಮೂರು ಬಾರಿ ರಾಜ್ಯದಲ್ಲಿ ಪ್ರವಾಹ ಬಂದಿದೆ. ಕಳೆದ ವರ್ಷ 19 ಜಿಲ್ಲೆಗಳ 123 ತಾಲೂಕಿನಲ್ಲಿ ಪ್ರವಾಹ ಆಗಿದೆ. ಈ ಬಾರಿ 25 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಇದರಿಂದ 21 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಮನೆಗಳಿಗೆ ಹಾನಿ ಉಂಟಾಗಿದೆ. ಪ್ರವಾಹ ಮುಗಿದರೂ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆ ನಿಂತಿಲ್ಲ.
69,30,000 ರೈತ ಕುಟುಂಬಗಳು ರಾಜ್ಯದಲ್ಲಿದ್ದು, ಈ ಪೈಕಿ ಸಣ್ಣ ರೈತರು, ಅತೀ ಸಣ್ಣ ರೈತರು ಶೇ. 78ರಷ್ಟಿದ್ದಾರೆ. ಕೋವಿಡ್ನಿಂದಾಗಿ ಸಾಕಷ್ಟು ಜನರು ಹಳ್ಳಿಗೆ ಹೋಗಿದ್ದಾರೆ. ಹಳ್ಳಿಗಳಲ್ಲಿ ಕೃಷಿ ಮಾಡಿದ ಕಾರಣ ಶೇ. 15ರಷ್ಟು ಬಿತ್ತನೆ ಹೆಚ್ಚಾಗಿದೆ. ಈ ವರ್ಷ ಸಂಭವಿಸಿದ ಪ್ರವಾಹದಿಂದ ಒಟ್ಟು ಬಿತ್ತನೆಯಲ್ಲಿ ಶೇ. 25ರಷ್ಟು ನಷ್ಟ ಉಂಟಾಗಿದೆ. 55 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆ ಹಾನಿ ಉಂಟಾಗಿದೆ. ನಿರಂತರ ಮಳೆಯಿಂದ ಕೊಳೆ ರೋಗ ಕೂಡ ಎದುರಾಗಿದೆ ಎಂದು ವಿವರಿಸಿದರು.