ಬೆಂಗಳೂರು: ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಯ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯಲಿ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಶಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬೆಳಗಾವಿಯ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆಯ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಪೊಲೀಸರಿಗೆ ತಿಳಿಸಿದ್ದೇನೆ. ಕಾನೂನು ಪ್ರಕಾರ ಅನುಮತಿ ಪಡೆದುಕೊಂಡು ರಾಯಣ್ಣನ ಅಭಿಮಾನಿಗಳು ಮೂರ್ತಿ ಸ್ಥಾಪನೆಗೆ ಮುಂದಾಗಬೇಕು. ಇಂತಹ ಸಂದರ್ಭದಲ್ಲಿ ಪೊಲೀಸರು ಸಂಯಮದಿಂದ ನಡೆದುಕೊಳ್ಳಬೇಕು ಎಂದಿದ್ದಾರೆ.
ಸಂಗೊಳ್ಳಿ ರಾಯಣ್ಣ ಜನ್ಮದಿನದಂದು ಅವರ ಪ್ರತಿಮೆ ಸ್ಥಾಪಿಸಲು ಪೀರನವಾಡಿಯ ರಾಯಣ್ಣ ಅಭಿಮಾನಿಗಳು ಮುಂದಾಗಿದ್ದರು. ರಾಯಣ್ಣ ಹುಟ್ಟೂರಿನಲ್ಲಿ ಸ್ಥಾಪಿಸಲು ಮುಂದಾಗಿದ್ದ ಪ್ರತಿಮೆಗೆ ಪರವಾನಗಿ ಪಡೆದಿಲ್ಲ ಎಂದು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದರು. ಇದನ್ನು ಖಂಡಿಸಿ ಹೋರಾಟ ನಡೆಸಿದ್ದ ಕನ್ನಡಪರ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಲಾಗಿತ್ತು.
ಪೊಲೀಸರಿಂದ ಅನುಮತಿ ಪಡೆದಿಲ್ಲ ಎಂದು ಒಂದು ವಾದ ಕೇಳಿ ಬಂದಿದ್ದರೆ, ಹಿಂದಿನ ಸರ್ಕಾರ ಇದ್ದಾಗಲೇ ಪರವಾನಗಿ ಪಡೆದಿದ್ದಾರೆ ಎಂದು ಸ್ಥಳೀಯರು ವಾದಿಸಿದ್ದಾರೆ. ಬೆಳಗಾವಿ ಗಡಿ ಜಿಲ್ಲೆಯಾಗಿದ್ದು ಸೂಕ್ಷ್ಮ ಪ್ರದೇಶವಾಗಿದೆ. ಈ ಹಿನ್ನೆಲೆ ಪ್ರತಿಯೊಂದು ವಿಚಾರವೂ ಇಲ್ಲಿ ವಿವಾದಕ್ಕೆ ಆಸ್ಪದವಾಗುವ ಹಿನ್ನೆಲೆ ಹೆಚ್ಚು ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.