ಬೆಂಗಳೂರು: ಎಐಸಿಸಿಯ ಸ್ಕ್ರೀನಿಂಗ್ ಕಮಿಟಿ ಸಭೆ ಇಂದೂ ಮುಂದುವರಿಯುವ ಹಿನ್ನೆಲೆಯಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮೈಸೂರು ಪ್ರವಾಸ (ಹೆದ್ದಾರಿ ವೀಕ್ಷಣೆ) ರದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ಮುಂದಿನ ವಾರ ಉದ್ಘಾಟಿಸಲಿರುವ ಬೆಂಗಳೂರು ಮೈಸೂರು ಹೆದ್ದಾರಿಯನ್ನು ಇಂದು ಪ್ರತಿಪಕ್ಷ ನಾಯಕರು ವೀಕ್ಷಿಸಬೇಕಿತ್ತು. ಪ್ರಧಾನಿ ಉದ್ಘಾಟನೆ ಮಾಡುವುದಕ್ಕೂ ಮುಂಚೆ ಹೆದ್ದಾರಿ ವೀಕ್ಷಿಸಿ ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ಸಿದ್ದರಾಮಯ್ಯ ತೀರ್ಮಾನಿಸಿದ್ದರು. ಆದರೆ ಕಾಂಗ್ರೆಸ್ ಪ್ರಮುಖ ಸಭೆ ಮುಂದುವರಿದ ಹಿನ್ನೆಲೆಯಲ್ಲಿ ಅವರು ತಮ್ಮ ಪ್ರವಾಸ ರದ್ದುಗೊಳಿಸಿದ್ದಾರೆ.
ಇಂದು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಿ ಮಾರ್ಗ ಪರಿಶೀಲನೆ ನಡೆಸಿ ನಂತರ ಸುದ್ದಿಗೋಷ್ಠಿ ನಡೆಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದರು. ಆದರೆ ಎಐಸಿಸಿ ಸ್ಕ್ರೀನಿಂಗ್ ಕಮಿಟಿ ಸಭೆ ನಿನ್ನೆಯೇ ಮುಕ್ತಾಯವಾಗುವ ಬದಲು ಇಂದು ಸಹ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಆದಷ್ಟು ಶೀಘ್ರ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿರುವ ಕಾಂಗ್ರೆಸ್ಗೆ ಈ ಸಭೆ ಅತ್ಯಂತ ಪ್ರಮುಖವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಇದೇ 12 ರಂದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಲೋಕಾರ್ಪಣೆ ಮಾಡಲಿದ್ದಾರೆ. ಕಳೆದ ಕೆಲವು ತಿಂಗಳಿಂದ ಸಾಕಷ್ಟು ದೊಡ್ಡ ಮಟ್ಟದ ಚರ್ಚೆಯಲ್ಲಿರುವ ಈ ಹೆದ್ದಾರಿ ರಾಜ್ಯ ರಾಜಧಾನಿಯಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗ. ಪ್ರಸ್ತುತ ಪ್ರತಿಪಕ್ಷ ನಾಯಕರಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಈ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹೆದ್ದಾರಿ ನಿರ್ಮಾಣ ಕಾಮಗಾರಿ ಚುರುಕು ಪಡೆದು ಇದೀಗ ಉದ್ಘಾಟನೆ ಹಂತ ತಲುಪಿದೆ. ತಮ್ಮ ಅವಧಿಯಲ್ಲಿ ಆರಂಭವಾಗಿದ್ದ ಕಾಮಗಾರಿಯ ಶ್ರೇಯಸ್ಸು ಬಿಜೆಪಿ ಸರ್ಕಾರ ಪಡೆಯುತ್ತಿರುವುದು ಪ್ರತಿಪಕ್ಷ ನಾಯಕರಿಗೆ ತೀವ್ರ ಬೇಸರ ತರಿಸಿದೆ. ಇದರಿಂದಾಗಿ ಹೆದ್ದಾರಿ ಪರಿಶೀಲನೆ ನಡೆಸಿ ತಮ್ಮ ಅಭಿಪ್ರಾಯವನ್ನು ಸುದ್ದಿಗೋಷ್ಠಿ ಮೂಲಕ ವ್ಯಕ್ತಪಡಿಸಲು ಅವರು ತೀರ್ಮಾನಿಸಿದ್ದರು.
'ಇದು ನಮ್ಮ ಯೋಜನೆ': ಇದು ನಮ್ಮ ಯೋಜನೆ ಎಂದು ಪ್ರತಿಪಾದಿಸಿದ್ದ ಸಿದ್ದರಾಮಯ್ಯ, ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವರಾಗಿದ್ದ ದಿವಂಗತ ಆಸ್ಕರ್ ಫರ್ನಾಂಡಿಸ್ ಅವರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಿದರು. ಅಲ್ಲದೆ, ಮೈಸೂರು-ಬೆಂಗಳೂರು ಹೆದ್ದಾರಿಯನ್ನು 10 ಪಥಗಳಾಗಿ ವಿಸ್ತರಿಸುವ ಪ್ರಸ್ತಾವನೆಗೆ ಹಸಿರು ನಿಶಾನೆ ತೋರಿದ್ದರು. ದಶಪಥ ರಸ್ತೆಯ ಕ್ರೆಡಿಟ್ ನಮ್ಮ ಸರಕಾರಕ್ಕೆ ಸಲ್ಲಬೇಕು. ಪ್ರತಾಪ ಸಿಂಹರಿಂದಾಗಲಿ, ಬಿಜೆಪಿ ಸರಕಾರದ್ದಾಗಲಿ ಇದರಲ್ಲಿ ಯಾವ ಪಾತ್ರವೂ ಇಲ್ಲ. ಪ್ರತಾಪ ಸಿಂಹ ಲೋಕಸಭಾ ವ್ಯಾಪ್ತಿಗೆ ಈ ಯೋಜನೆ ಕೆಲವೇ ಕಿ.ಮೀ ಮಾತ್ರ ಸೇರುತ್ತದೆ. ಆದರೂ ನಮ್ಮದು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ.