ಕಾನ್ಫರೆನ್ಸ್ ಹಾಲ್ ಅನ್ನು ಉದ್ಘಾಟಿಸಿದ ಡಿಸಿಎಂ ಡಿ ಕೆ ಶಿವಕುಮಾರ್ ಬೆಂಗಳೂರು:ಐದು ವರ್ಷ ತಾವೇ ಸಿಎಂ ಎಂಬಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ತಾರಕಕ್ಕೇರುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿ 15 ಸಚಿವರ ಜೊತೆ ಕಾವೇರಿ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಸಭೆ ನಡೆಸಿದ್ದಾರೆ.
ಒಂದೆಡೆ ಬಣ ರಾಜಕಾರಣ, ಇನ್ನೊಂದೆಡೆ ಸಿಎಂ ಹೇಳಿಕೆ ವಿಚಾರ, ಮತ್ತೊಂದೆಡೆ ಸಚಿವರ ಬಹಿರಂಗ ಹೇಳಿಕೆಗಳಿಂದ ಸರ್ಕಾರದಲ್ಲಿ ಗೊಂದಲ ಏರ್ಪಟ್ಟಿದೆ. ಈ ಗೊಂದಲ ನಿವಾರಣೆಗಾಗಿ ಸಿಎಂ ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಸಭೆ ನಡೆಸಿ, ನಾವೆಲ್ಲರೂ ಒಂದೇ, ಯಾವ ಭಿನ್ನಮತವೂ ಇಲ್ಲ ಎಂಬ ಸಂದೇಶ ರಾವಾನಿಸಲು ಮುಂದಾಗಿದ್ದಾರೆ. ಈಗಾಗಲೇ ಹೈಕಮಾಂಡ್ ಪರಸ್ಪರ ಸಮಾಲೋಚಿಸಿ ಗೊಂದಲ ಬಗೆಹರಿಸಿಕೊಂಡು ಚುನಾವಣೆಗೆ ತಯಾರಾಗುವಂತೆ ತಾಕೀತು ಮಾಡಿದೆ. ಗೊಂದಲಕ್ಕೆ ಕಾರಣರಾಗಿರುವ ಪ್ರಮುಖ ಸಚಿವರ ಜತೆ ಮೊದಲ ಹಂತದ ಉಪಹಾರ ಸಭೆ ಕರೆದು ಗೊಂದಲ ನಿವಾರಣೆ, ಬಹಿರಂಗ ಹೇಳಿಕೆ ನೀಡದಂತೆ ಸಿಎಂ ಸೂಚನೆ ನೀಡಿದ್ದಾರೆ.
ಲೋಕಸಭೆ ಚುನಾವಣೆ ತಯಾರಿ, ಗ್ಯಾರಂಟಿಗಳ ಸಕ್ಸಸ್, ಸದ್ಯ ಐದೂವರೆ ತಿಂಗಳಲ್ಲಿ ಡ್ಯಾಮೇಜ್ ಮಾಡಿದ ಪ್ರಮುಖ ಗೊಂದಲಗಳನ್ನು ಬಗೆಹರಿಸಲು ಸಿಎಂ ಕಸರತ್ತು ನಡೆಸುತ್ತಿದ್ದಾರೆ. ಕೆಲ ನಾಯಕರ ನಡುವಿನ ಗೊಂದಲ ಬಗೆಹರಿಸುವುದು, ಪರಮೇಶ್ವರ್ ನಿವಾಸದಲ್ಲಿ ನಡೆದ ಡಿನ್ನರ್ ಸಭೆಯ ಬಳಿಕ ಸೃಷ್ಟಿಯಾದ ಗೊಂದಲಗಳಿಗೆ ತೆರೆ ಎಳೆಯುವುದು, ಶಾಸಕರ ಗೊಂದಲಕಾರಿ, ಮುಜುಗರಭರಿತ ಹೇಳಿಕೆಗಳಿಗೆ ಕಡಿವಾಣ ಹಾಕುವುದು, ಪಕ್ಷ ಸಂಘಟನೆ, ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು, ಮನೆ ಮನೆಗೆ ಗ್ಯಾರಂಟಿಗಳ ತಲುಪಿಸುವ ಬಗ್ಗೆ, ಈ ಬಗ್ಗೆ ಜನರಲ್ಲಿ ಜಾಗೃತಿ, ಜನರ ಒಲವು ಗಳಿಸುವ ತಂತ್ರಗಾರಿಕೆ ಸೇರಿದಂತೆ ಕೆಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಈ ಬಾರಿ 20 ಕ್ಷೇತ್ರ ಗೆಲ್ಲುತ್ತೇವೆ ಅಂತ ಮಾತು ಕೊಟ್ಟಿದ್ದು, ಆಕಾಂಕ್ಷಿ ಅಭ್ಯರ್ಥಿಗಳ ಬಗ್ಗೆ ಸರಿಯಾಗಿ ಅಭಿಪ್ರಾಯ ಸಂಗ್ರಹಿಸಬೇಕಿದೆ. ಹಾಗಾಗಿ ಮತ್ತೊಮ್ಮೆ ಕ್ಷೇತ್ರ ಪ್ರವಾಸ ಮಾಡಿ, ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಬೇಕಿದೆ. ವೀಕ್ಷಕರು ತಮಗೆ ಕೊಟ್ಟಿರುವ ಕ್ಷೇತ್ರ ಗೆಲ್ಲಿಸಿಕೊಂಡು ಬರಬೇಕು. ಪಂಚ ಗ್ಯಾರಂಟಿ ಸಮರ್ಪಕವಾಗಿ ಜಾರಿಯಾಗಬೇಕು. ಈ ಸಂಬಂಧ ಕ್ಷೇತ್ರವಾರು ಜನರಿಗೆ ಪಂಚ ಗ್ಯಾರಂಟಿ ಯೋಜನೆ ತಲುಪುವಂತೆ ನೋಡಿಕೊಳ್ಳಬೇಕಿದೆ ಎಂದು ಸಿಎಂ ತಿಳಿಸಿದ್ದಾರೆ.
ಕಾವೇರಿಯಲ್ಲಿ ನೂತನ ಕಾನ್ಫರೆನ್ಸ್ ಹಾಲ್ ಉದ್ಘಾಟನೆ: ಇತ್ತ ಡಿಸಿಎಂ ಡಿ ಕೆ ಶಿವಕುಮಾರ್ ಕಾವೇರಿ ನಿವಾಸದಲ್ಲಿ ನೂತನವಾಗಿ ನಿರ್ಮಿಸಿದ ಕಾನ್ಫರೆನ್ಸ್ ಹಾಲ್ ಅನ್ನು ಉದ್ಘಾಟಿಸಿದರು. ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸದಲ್ಲಿನ ನೂತನ ಹಾಲ್ನ ರಿಬ್ಬನ್ ಕಟ್ ಮಾಡುವಂತೆ ಡಿಕೆಶಿಗೆ ಸೂಚಿಸಿದರು. ಅದರಂತೆ ಡಿಕೆಶಿ ರಿಬ್ಬನ್ ಕಟ್ ಮಾಡಿದರು. ಇದೇ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್ ಕಿಚಾಯಿಸಿದ ಗೃಹ ಸಚಿವ ಪರಮೇಶ್ವರ್, ಅಧ್ಯಕ್ಷರ ಕೈಯಿಂದ ಉದ್ಘಾಟನೆ ಆದರೆ ಪಕ್ಷಕ್ಕೆ ಒಳ್ಳೆಯದು ಎಂದರು. ಈ ವೇಳೆ ಕೆ ಎನ್. ರಾಜಣ್ಣ ಎಲ್ಲಿ ಅಂತ ಡಿಕೆಶಿ ಕರೆದರು. ನಿನ್ನೆ ನೀವು ಸಿಎಂ ಆಗಲಿ ಅಂತ ಹೇಳಿಕೆ ನೀಡಿದ್ದಾರೆ ಎಂದು ಡಿಕೆಶಿ ಅವರು ಪರಮೇಶ್ವರ್ ಕಾಲೆಳೆದರು.
ನಮ್ಮಲ್ಲಿ ಯಾವ ಗೊಂದಲವೂ ಇಲ್ಲ ಎಂದ ರಾಮಲಿಂಗಾರೆಡ್ಡಿ ನಮ್ಮಲ್ಲಿ ಯಾವ ಗೊಂದಲವೂ ಇಲ್ಲ ಎಂದ ರಾಮಲಿಂಗಾರೆಡ್ಡಿ: "ನಮ್ಮಲ್ಲಿ ಯಾವ ಗೊಂದಲಗಳೂ ಇಲ್ಲ. ಅಭಿವೃದ್ಧಿ ಬಿಟ್ಟು ಬೇರೆ ಯಾವ ವಿಚಾರ ಮಾತನಾಡಬಾರದು ಎಂದು ಸಿಎಂ ಸೂಚನೆ ನೀಡಿದ್ದಾರೆ" ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಬ್ರೇಕ್ ಫಾಸ್ಟ್ ಸಭೆ ಬಳಿಕ ಮಾತನಾಡಿದ ಅವರು, "ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗಿದೆ. ಬರಗಾಲ ಎದುರಿಸುವ ಕೆಲಸ ಆಗಬೇಕು ಎಂದು ಸಭೆಯಲ್ಲಿ ಚರ್ಚೆ ಆಗಿದೆ. ಕೇಂದ್ರ ಸರ್ಕಾರ ಈಗಲೂ ಬರ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರದ ಸಚಿವರು ವಿಧಾನಸಭೆ ಚುನಾವಣೆ ವೇಳೆ ದಂಡಯಾತ್ರೆಗೆ ಬಂದಿದ್ದರು ಅಷ್ಟೇ" ಎಂದು ತಿಳಿಸಿದರು. "ಯಾರೂ ಕೂಡ ಬಹಿರಂಗವಾಗಿ ಮಾತನಾಡುವುದು ಬೇಡ ಎಂದು ಸಿಎಂ ಸೂಚಿಸಿದ್ದಾರೆ. ಸಚಿವರು ಅಭಿವೃದ್ಧಿ ಬಗ್ಗೆ ಮಾತ್ರ ಮಾತನಾಡುವಂತೆ ಸೂಚಿಸಿದ್ದಾರೆ" ಎಂದರು.
ಇದನ್ನೂ ಓದಿ :ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್: ಡಿಕೆಶಿ ಸೇರಿ 16 ಸಚಿವರಿಗೆ ಆಹ್ವಾನ