ಕರ್ನಾಟಕ

karnataka

ETV Bharat / state

ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸಿ: ಸಿಎಂಗೆ ಸಿದ್ದರಾಮಯ್ಯ ಪತ್ರ - ಬೆಂಗಳೂರು

ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇತ್ತೀಚೆಗೆ ಭೇಟಿ ನೀಡಿದ್ದರು. ಅಲ್ಲಿಯ ಪರಿಸ್ಥಿತಿ ಆಧರಿಸಿ ಅವರು ಕೂಡಲೇ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

Siddaramaiah
ವಿಪಕ್ಷ ನಾಯಕ ಸಿದ್ದರಾಮಯ್ಯ

By

Published : Oct 29, 2020, 12:11 PM IST

ಬೆಂಗಳೂರು:ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸುವುದರ ಜೊತೆಗೆ ಹಾನಿಗೊಳಗಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಮರು ನಿರ್ಮಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿದ್ದರಾಮಯ್ಯ ಇತ್ತೀಚೆಗೆ ಭೇಟಿ ನೀಡಿದ್ದರು. ಅಲ್ಲಿಯ ಪರಿಸ್ಥಿತಿ ಆಧರಿಸಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಅ. 19 ಮತ್ತು 20ರಂದು ಬಾದಾಮಿ ಕ್ಷೇತ್ರದ ಅನೇಕ ಗ್ರಾಮಗಳಿಗೆ ಮತ್ತು ಅ. 25 ಹಾಗೂ 26ರಂದು ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಮಾಡಿದ್ದೇನೆ. ಸಂತ್ರಸ್ತ ಪ್ರದೇಶಗಳ ಜನಪ್ರತಿನಿಧಿಗಳು, ಮುಖಂಡರುಗಳು ಮುಂತಾದವರು ನನ್ನ ಜೊತೆಯಲ್ಲಿ ಭಾಗವಹಿಸಿದ್ದರು. ನನ್ನ ಅನುಭವದ ಪ್ರಕಾರ ಈ ವರ್ಷದ ಹಾನಿ ಹಿಂದೆಂದಿಗಿಂತಲೂ ದುಪ್ಪಟ್ಟು ಪ್ರಮಾಣದಲ್ಲಿದೆ.

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ಕೊರೊನಾಕ್ಕೆ ತುತ್ತಾಗಿ ಜೀವನವನ್ನು ಕಳೆದುಕೊಂಡು ಹಳ್ಳಿಗಳಿಗೆ ಬಂದ ಜನ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ. 30ಕ್ಕಿಂತ ಅಧಿಕ ಬಿತ್ತನೆಯಾಗಿದೆ. ಬೆಳೆ ಕೈಗೆ ಬರುವ ಕಾಲವಿದು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದಲ್ಲಿ ಭೀಕರ ಮಳೆಯಾಗಿದೆ. ಉಳಿದ ಜಿಲ್ಲೆಗಳ ಜನರ ಕಷ್ಟವೂ ಭಿನ್ನವಾಗಿಲ್ಲ. ಶೇಂಗಾ, ಈರುಳ್ಳಿ, ಅಡಿಕೆ, ಭತ್ತ, ಕಾಫಿ, ಮೆಣಸು, ಜೋಳ, ಹಲವು ದ್ವಿದಳ ಧಾನ್ಯಗಳು, ಹತ್ತಿ, ಮೆಣಸು, ಮೆಣಸಿನಕಾಯಿ, ರಾಗಿ, ಸಜ್ಜೆ ಮುಂತಾದ ಬೆಳೆಗಳು ಕೊಳೆತು ಹೋಗಿವೆ, ಇಲ್ಲ ಕೊಚ್ಚಿ ಹೋಗಿವೆ ಎಂದು ವಿವರಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ನಗರಗಳಿಗೆ ವ್ಯಾಪಕವಾಗಿ ವಲಸೆ ಹೋಗುವ ಕಲ್ಯಾಣ ಕರ್ನಾಟಕದ ರೈತಾಪಿ ಮಕ್ಕಳು, ಬಡವರ ಬದುಕು ಮಳೆಯಿಂದಾಗಿ ಕೊಚ್ಚಿ ಹೋಗಿದೆ. ಕಳೆದ ವರ್ಷ ಬಿದ್ದ ಮಳೆಯಿಂದಾಗಿ ಹಾನಿಯಾದ ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಮನೆಗಳಿಗೆ ಇದುವರೆಗೂ ಪರಿಹಾರ ನೀಡಿಲ್ಲ. ಕೇಂದ್ರ ಸರ್ಕಾರಕ್ಕೆ 2,47,000 ಮನೆಗಳಿಗೆ ಹಾನಿಯಾಗಿದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಪರಿಹಾರ ನೀಡಿರುವುದು ಕೇವಲ 1,24,000 ಮನೆಗಳಿಗೆ ಮಾತ್ರ. ಅದು ಸಹ ಅಲ್ಪ ಸ್ವಲ್ಪ ಪ್ರಮಾಣದಲ್ಲಿ. ಪೂರ್ಣ ಹಾನಿಯಾದ ಮನೆಗಳಿಗೆ ರೂ. 5 ಲಕ್ಷ ನೀಡುವುದಾಗಿ ಹೇಳಿ ಇದುವರೆಗೆ ಕೇವಲ 1 ಲಕ್ಷ ರೂ.ಗಳನ್ನು ನೀಡಲಾಗಿದೆ. ಕೊಚ್ಚಿ ಹೋದ ಭೂಮಿಗೆ, ಕೊಳೆತು ಹೋದ ಬೆಳೆಗಳಿಗೆ ಇನ್ನೂ ಪರಿಹಾರವನ್ನೇ ನೀಡಿಲ್ಲವೆಂದು ನಾನು ಭೇಟಿ ಕೊಟ್ಟ ಗ್ರಾಮಗಳ ರೈತರು ಪದೇ ಪದೆ ಹೇಳುತ್ತಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ಕಳೆದ ವರ್ಷ ನದಿ ಪಾತ್ರಗಳ ಗ್ರಾಮಗಳ ಜನರು ತೀವ್ರ ನೋವು ಅನುಭವಿಸಿದರು. ಮಳೆ ಮತ್ತು ನದಿಗಳು ಉಕ್ಕಿ ಹರಿದಿದ್ದರಿಂದ ಸುಮಾರು 10 ಲಕ್ಷ ಹೆಕ್ಟೇರ್ ಭೂಮಿ ಹಾನಿಗೊಳಗಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅದರ ಎರಡರಿಂದ ಎರಡೂವರೆ ಪಟ್ಟು ಹೆಚ್ಚು ಹಾನಿಯಾಗಿದೆ. ಆಗಸ್ಟ್ ತಿಂಗಳಲ್ಲಿ 4ರಿಂದ 8 ಮತ್ತು 15ರಿಂದ 18ರವರೆಗೆ ರಾಜ್ಯದ 23 ಜಿಲ್ಲೆಗಳ 130 ತಾಲೂಕುಗಳಲ್ಲಿ ಸುರಿದ ಮಳೆಯಿಂದಾಗಿ ಸುಮಾರು 4.60 ಲಕ್ಷ ಹೆಕ್ಟೇರ್ ಭೂಮಿಯಲ್ಲಿದ್ದ ಬೆಳೆಗಳು ಹಾನಿಗೊಳಗಾಗಿದ್ದವು. 13,573 ಮನೆಗಳು ಹಾನಿಯಾಗಿದ್ದವು. 30,455 ಕಿ.ಮೀ. ರಸ್ತೆ, 5080 ಸರ್ಕಾರಿ ಕಟ್ಟಡಗಳು, 3,481 ಸೇತುವೆ, 1,659 ಕೆರೆಗಳು, 30,000 ಮನೆಗಳು ಹಾನಿಗೊಳಗಾಗಿದ್ದವು.

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ಸೆಪ್ಟೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ 8.68 ಲಕ್ಷ ಹೆಕ್ಟೇರ್ ಕೃಷಿ ಬೆಳೆ, 0.88 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಅಂದರೆ 11 ಲಕ್ಷ ಹೆಕ್ಟೇರ್​ಗಳಲ್ಲಿ ಬೆಳೆದ ಬೆಳೆ ಸೆಪ್ಟೆಂಬರ್​ವರೆಗೆ ಹಾನಿಯಾಗಿದೆ. ಈಗ ಅಕ್ಟೋಬರ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಮುಕ್ಕಾಲು ರಾಜ್ಯವೇ ಕಂಗೆಟ್ಟು ಕೂತಿದೆ. ರೈತ ಬೆಳೆದ ಬೆಳೆ ಕೈಗೆ ಬರದೆ ನೀರುಪಾಲಾಗಿದೆ ಎಂದಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಪತ್ರ

ದ್ವಿದಳ ಧಾನ್ಯ ನಷ್ಟ: ಕರ್ನಾಟಕ ರೆಡ್ ಗ್ರಾಂ ಬೆಳೆಗಾರರ ಸಂಘದ ಅಂದಾಜಿನಂತೆ 7.55 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, ಅದರಲ್ಲಿ ಸುಮಾರು 60ಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾದ ದ್ವಿದಳ ಧಾನ್ಯಗಳು ನಷ್ಟವಾಗಿವೆ. ಬೀದರ್ ಜಿಲ್ಲೆಯ ಕೃಷಿ ಇಲಾಖೆಯ ಪ್ರಕಾರ ಬಿತ್ತನೆಯಾದ 3,70,982 ಹೆಕ್ಟೇರ್​​ಗಳಲ್ಲಿ 2,47,209 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಮಳೆಯಿಂದ ಸಂಪೂರ್ಣ ಹಾನಿಯಾಗಿದೆ. ಅಂದರೆ ಸುಮಾರು ಶೇ. 66.64ರಷ್ಟು ಹಾನಿಯಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ ಕಲಬುರಗಿಯಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ 85 ಸಾವಿರ ಹೆಕ್ಟೇರ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳ ಮೊದಲ ವಾರದವರೆಗೆ 1.90 ಸಾವಿರ ಹೆಕ್ಟೇರ್ ಹಾನಿಯಾಗಿದ್ದರೆ, ಅಕ್ಟೋಬರ್ 12ರಿಂದ 15ರವರೆಗೆ ಮೂರು ದಿನಗಳ ಅವಧಿಯವರೆಗೆ ಸುಮಾರು 1.54 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಒಟ್ಟು 3,44,085 ಹೆಕ್ಟೇರ್​​ನಲ್ಲಿ 1.12 ಲಕ್ಷ ಹೆಕ್ಟೇರ್ ತೊಗರಿ, ಸುಮಾರು 34 ಸಾವಿರ ಹೆಕ್ಟೇರ್ ಹತ್ತಿ ನಾಶವಾಗಿದೆ. ಒಟ್ಟು ಬಿತ್ತನೆ ಮಾಡಿದ ಪ್ರದೇಶದಲ್ಲಿ ಶೇ. 60ರಷ್ಟು ಬೆಳೆ ನಾಶವಾಗಿದೆ. ಇದರೊಂದಿಗೆ ಜನರ ಸಂಪೂರ್ಣ ಜೀವನ ನೀರುಪಾಲಾಗಿದೆ. ಇದಿನ್ನೂ ಪ್ರಾಥಮಿಕ ಸಮೀಕ್ಷೆಯ ಮಾಹಿತಿಯಷ್ಟೇ. ಸಮೀಕ್ಷೆ ಪೂರ್ಣಗೊಂಡರೆ 4.50 ಲಕ್ಷ ಹೆಕ್ಟೇರ್ ಮೀರುತ್ತದೆ ಎಂದಿದ್ದಾರೆ.

ವಿಜಯಪುರ ಹಾಗೂ ರಾಯಚೂರು ಜಿಲ್ಲೆಗಳಿಗೂ ಭೇಟಿ ನೀಡಿ ಬಂದಿರುವ ಅವರು, ಅಲ್ಲಿನ ವಸ್ತುಸ್ಥಿತಿಯನ್ನು ಕೂಡ ಸಿಎಂಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ. ಅತ್ಯಂತ ತುರ್ತಾಗಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಬೇಕೆಂದು ಹಾಗೂ ಹಾನಿಗೊಳಗಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪುನರ್ ನಿರ್ಮಿಸಬೇಕೆಂದು ಒತ್ತಾಯಿಸುತ್ತೇನೆ. ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲು ತುರ್ತಾಗಿ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಬೇಕೆಂದು ಸಹ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದಿದ್ದಾರೆ.

ABOUT THE AUTHOR

...view details