ಬೆಂಗಳೂರು:ಹಾಲಿನ ಖರೀದಿ ಬೆಲೆ ಇಳಿಕೆ ಮಾಡುವ ಮೂಲಕ ರಾಜ್ಯ ಸರ್ಕಾರ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ನಾಶ ಮಾಡಲು ಹೊರಟಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪರವರಿಗೆ ಬರೆದ ಪತ್ರದಲ್ಲಿ ವಿವರ ನೀಡಿರುವ ಅವರು, 'ಕ್ಷೀರಧಾರೆ' ಯೋಜನೆಯಡಿ ಖರೀದಿಸುವ ಹಾಲಿನ ಬೆಲೆಯನ್ನು ರೂ. 5ರವರೆಗೆ ಕಡಿತ ಮಾಡಿರುವುದು ಕೊರೊನಾ ಕಾಲದ ರೈತರ ಕಷ್ಟದ ಮೇಲೆ ರಾಜ್ಯ ಸರ್ಕಾರ ಹಾಕಿದ ಇನ್ನೊಂದು ಬರೆ ಎಂದಿದ್ದಾರೆ.
ಈ ರೀತಿ ಬೆಲೆ ಇಳಿಸುವ ಮೂಲಕ ರೈತರ ಜೊತೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನೇ ನಾಶ ಮಾಡಲು ಮುಖ್ಯಮಂತ್ರಿಗಳು ಹೊರಟಂತೆ ಕಾಣುತ್ತಿದೆ ಎಂದು ಆರೋಪಿಸಿರುವ ಅವರು, 'ಕ್ಷೀರಧಾರೆ' ಯೋಜನೆಯಡಿ ರೈತರ ಹಾಲಿಗೆ ರೂ. 5ರಂತೆ ನೀಡುತ್ತಿದ್ದ ಪ್ರೋತ್ಸಾಹ ಧನ ಸೇರಿದಂತೆ ಸುಮಾರು ರೂ.138 ಕೋಟಿಯಷ್ಟು ಹಣವನ್ನು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಈ ಬಾಕಿಯನ್ನು ತಕ್ಷಣ ಬಿಡುಗಡೆಗೊಳಿಸಬೇಕು ಮತ್ತು ಲೀಟರ್‌ಗೆ ಕನಿಷ್ಠ 35 ರೂಪಾಯಿ ನೀಡಿ ರೈತರಿಂದ ಹಾಲು ಖರೀದಿಸಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಮತ್ತೊಂದು ಪತ್ರ:ಕೆಎಸ್‌ಆರ್‌ಟಿಸಿ ನೌಕರರಿಗೆ 1 ವರ್ಷ ವೇತನರಹಿತ ರಜೆ ನೀಡುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರವರ ಆಲೋಚನೆ ಕಾರ್ಮಿಕ ವಿರೋಧಿ ಮಾತ್ರವಲ್ಲ ಅಮಾನವೀಯ ಕೂಡಾ ಹೌದು. ಕೆಎಸ್‌ಆರ್‌ಟಿಸಿಯ ಮೇಲ್ಪಂಕ್ತಿಯನ್ನು ಇತರ ಇಲಾಖೆಗಳು ಮತ್ತು ಖಾಸಗಿ ಕಂಪೆನಿಗಳು ಅನುಸರಿಸಿದರೆ ಲಕ್ಷಾಂತರ ಕಾರ್ಮಿಕರ ಕುಟುಂಬಗಳ ಪಾಡೇನು? ರಾಜ್ಯ ಸರ್ಕಾರ ದಿವಾಳಿಯಾಗಿದೆಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.