ಕರ್ನಾಟಕ

karnataka

ETV Bharat / state

ಸಾಮಾಜಿಕ ನ್ಯಾಯ ಪಾಲಿಸಿದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ: ಸಚಿವ ಸಂಪುಟದಲ್ಲಿ ಎಲ್ಲ ಸಮುದಾಯಕ್ಕೂ ಪ್ರಾತಿನಿಧ್ಯ.. - ಕಾಂಗ್ರೆಸ್ ಸರ್ಕಾರ ಯಶಸ್ವಿ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ ಕರ್ನಾಟಕ, ಮೈಸೂರು ಕರ್ನಾಟಕ ಹಾಗೂ ಮಧ್ಯ ಕರ್ನಾಟಕಕ್ಕೂ ಪ್ರಾತಿನಿಧ್ಯ ನೀಡಿದ್ದು, ಜಾತಿವಾರು ಲೆಕ್ಕಾಚಾರಗಳನ್ನೂ ಸರಿದೂಗಿಸಿದೆ.

CM Siddaramaiah
ಸಿಎಂ ಸಿದ್ದರಾಮಯ್ಯ

By

Published : May 26, 2023, 10:57 PM IST

Updated : May 26, 2023, 11:49 PM IST

ಬೆಂಗಳೂರು: ಜಾತಿವಾರು ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಜತೆಗೆ ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಹಿರಿಯ ಹಾಗೂ ಕಿರಿಯ ಶಾಸಕರುಗಳನ್ನು ಸಚಿವಸಂಪುಟಕ್ಕೆ ಆಯ್ಕೆ ಮಾಡಿಕೊಳ್ಳುವ ಕಸರತ್ತಿನಲ್ಲಿ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿದೆ. ಈ ಸಾರಿ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆದ್ದಿರುವ ಲಿಂಗಾಯತ ಸಮುದಾಯಕ್ಕೆ ಒಟ್ಟು ಏಳು ಸಚಿವ ಸ್ಥಾನ ನೀಡಲಾಗಿದ್ದು ಈ ಸಮುದಾಯದ ಬಹುತೇಕ ಎಲ್ಲಾ ಪ್ರಮುಖ ಒಳಪಂಗಡಗಳನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ಬಣಜಿಗರಲ್ಲಿ ಈಶ್ವರ್ ಖಂಡ್ರೆ, ಪಂಚಮಸಾಲಿಗಳಲ್ಲಿ ಲಕ್ಷ್ಮೀ ಹೆಬ್ಬಾಳ್‌ಕರ್ ಮತ್ತು ಶಿವಾನಂದ ಪಾಟೀಲ್, ಕೂಡು ಒಕ್ಕಲಿಗರಲ್ಲಿ ಎಂ.ಬಿ.ಪಾಟೀಲ್, ಸಾದು ಲಿಂಗಾಯತರಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್, ಆದಿ ಬಣಜಿಗರಲ್ಲಿ ಶರಣ ಪ್ರಕಾಶ ಪಾಟೀಲ್ ರೆಡ್ಡಿ ಲಿಂಗಾಯತರಲ್ಲಿ ದರ್ಶನಾಪುರ ಮತ್ತು ವೈಷ್ಣವ ರೆಡ್ಡಿಯ ಪ್ರತಿನಿಧಿಯಾಗಿ ಹೆಚ್.ಕೆ.ಪಾಟೀಲ್ ಅವರಿಗೆ ಪ್ರಾತಿನಿಧ್ಯ ದೊರೆತಿದೆ.

ಒಕ್ಕಲಿಗರಲ್ಲಿ ಗಂಗಟಕಾರ್ ಒಕ್ಕಲಿಗರಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಚೆಲುವರಾಯಸ್ವಾಮಿ ಅವರುಗಳು ಇದ್ದಾರೆ. ಪಿರಿಯಾಪಟ್ಟಣ ವೆಂಕಟೇಶ್ ಕುಂಚಟಿಗರು, ದಾಸ ಒಕ್ಕಲಿಗರಲ್ಲಿ ಕೃಷ್ಣ ಬೈರೇಗೌಡ ಸೇರಿ ನಾಲ್ಕು ಮಂದಿಗೆ ಪ್ರಾತಿನಿಧ್ಯ ದೊರೆತಿದೆ. ದಲಿತ ಸಮುದಾಯಕ್ಕೆ ಬರೋಬ್ಬರಿ 9 ಸಚಿವ ಸ್ಥಾನ ಲಭಿಸಿದ್ದು ಮುನಿಯಪ್ಪ, ಜಿ.ಪರಮೇಶ್ವರ್, ಹೆಸ್.ಸಿ.ಮಹದೇವಪ್ಪ, ತಿಮ್ಮಾಪುರ ಮತ್ತು ಪ್ರಿಯಾಂಕ್ ಖರ್ಗೆ ಅವರುಗಳು ಪರಿಶಿಷ್ಟ ಜಾತಿ ಖೋಟಾದಲ್ಲಿ ಸಚಿವರಾಗಿದ್ದಾರೆ. ಎಡಗೈ ಮತ್ತು ಬಲಗೈ ಸಮುದಾಯಗಳನ್ನು ಸರಿದೂಗಿಸಲಾಗಿದೆ. ಪರಿಶಿಷ್ಟ ಪಂಗಡದ ಪ್ರತಿನಿಧಿಗಳಾಗಿ ನಾಗೇಂದ್ರ, ಮಧುಗಿರಿ ರಾಜಣ್ಣ, ಸತೀಶ್ ಜಾರಕಿಹೊಳಿ ಅವರಿಗೆ ಅವಕಾಶ ದೊರೆತಿದೆ. ವಿಧಾನ ಪರಿಷತ್ ಮುಖ್ಯ ಸಚೇತಕರಾಗಿರುವ ಪ್ರಕಾಶ್ ರಾಥೋಡ್ ಕೂಡ ಬಂಜಾರ ಸಮುದಾಯದವರು.

ರಾಜು ಕ್ಷತ್ರಿಯ ಸಮುದಾಯದ ಬೋಸರಾಜು, ಅತ್ಯಂತ ಸಣ್ಣ ಹಿಂದುಳಿದ ಸಮುದಾಯಗಳಲ್ಲಿ ಒಂದಾದ ಬೆಸ್ತ ಸಮುದಾಯದ ಮಾಂಕಾಳ ವೈದ್ಯ, ಮರಾಠ ಸಮಾಜದಿಂದ ಸಂತೋಷ್ ಲಾಡ್ ಇದ್ದಾರೆ. ಕುರುಬ ಸಮುದಾಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಬೈರತಿ ಸುರೇಶ್ ಅವರಿಗೆ ಮಾತ್ರ ಸಂಪುಟದೊಳಗೆ ಪ್ರವೇಶ ದೊರೆತಿದೆ. ಬಿಲ್ಲವ ಸಮುದಾಯದಿಂದ ಮಧು ಬಂಗಾರಪ್ಪ ಇದ್ದಾರೆ. ಮುಸ್ಲಿಂ ಸಮುದಾಯದಿಂದ ಜಮೀರ್ ಅಹಮದ್ ಖಾನ್, ರಹೀಂ ಖಾನ್ ಇಬ್ಬರು ಸಚಿವರಾಗಿದ್ದರೆ, ಯು.ಟಿ.ಖಾದರ್ ಸ್ಪೀಕರ್ ಆಗಿದ್ದಾರೆ.

ಕ್ರೈಸ್ತ ಸಮುದಾಯದಿಂದ ಕೆ.ಜೆ.ಜಾರ್ಜ್ ಅವರಿಗೆ ಸಚಿವ ಸ್ಥಾನ ಒಲಿದಿದೆ. ಜೈನ ಸಮುದಾಯದಿಂದ ಡಿ.ಸುಧಾಕರ್ ಹಾಗೂ ಬ್ರಾಹ್ಮಣ ಸಮುದಾಯದ ಪ್ರತಿನಿಧಿಯಾಗಿ ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ದೊರಕಿದೆ. ಹೀಗೆ ಜಾತಿ, ಉಪ ಜಾತಿಗಳನ್ನೂ ಹಳೆದು ತೂಗಿ ಪರಿಗಣಿಸಲಾಗಿದೆ. ಪ್ರಾದೇಶಿಕ ಸಮತೋಲನ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೂ ಪ್ರಾತಿನಿಧ್ಯ ದೊರೆತಿದೆ. ಮಲೆನಾಡು, ಕರಾವಳಿ ಕರ್ನಾಟಕ ಮತ್ತು ಮೈಸೂರು ಕರ್ನಾಟಕ ಹಾಗೂ ಮಧ್ಯ ಕರ್ನಾಟಕಕ್ಕೆ ಸಿಕ್ಕಿರುವ ಪ್ರಾತಿನಿಧ್ಯ ಜಾತಿವಾರು ಲೆಕ್ಕಾಚಾರಗಳನ್ನೂ ಸರಿದೂಗಿಸಿದೆ.

ಕೊಂಚ ಕಹಿಯೂ ಇದೆ. ಈ ಎಲ್ಲ ಸಮತೋಲನದ ಮಧ್ಯೆ ಪ್ರಸ್ತುತ ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿರುವ ಬಿಕೆ ಹರಿಪ್ರಸಾದ್ ಗೆ ಸಚಿವ ಸ್ಥಾನ ಕೈತಪ್ಪಿದೆ. ಇದರಿಂದ ಬೇಸರಗೊಂಡಿರುವ ಅವರು ಪ್ರತಿಪಕ್ಷ ನಾಯಕ ಸ್ಥಾನ ಹಾಗೂ ವಿಧಾನಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿ ಇದೆ.

ಈಗಾಗಲೇ ತಮ್ಮ ಬೆಂಬಲಿಗರ ಜೊತೆ ಮಾತುಕತೆ ನಡೆಸಿರುವ ಅವರು ನಾಳೆ ತಮ್ಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಸಚಿವ ಸಂಪುಟಕ್ಕೆ ಸೇರುವ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಹರಿಪ್ರಸಾದ್ ಗೆ ರಾಷ್ಟ್ರೀಯ ನಾಯಕರ ಬೆಂಬಲ ಸಿಗುವ ನಿರೀಕ್ಷೆ ಇತ್ತು. ಆದರೆ ಸಂಪುಟಕ್ಕೆ ಸೇರುವ ಅವಕಾಶ ಲಭಿಸದೇ ನಿರಾಸೆಗೊಂಡಿರುವ ಅವರು ಬೇಸರದಿಂದ ತಮ್ಮ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಇದೆ.

ಇದನ್ನೂಓದಿ:ರಾಷ್ಟ್ರಪತಿ ಚುನಾವಣೆ ಬಹಿಷ್ಕರಿಸಿದ್ದು ಜೆಡಿಎಸ್​ ಮರೆಯಬಾರದು ಎಂದ ಡಿಕೆಶಿ.. ನಾವು ಕಾಂಗ್ರೆಸ್‌ನ ಗುಲಾಮರಲ್ಲ ಎಂದ ಹೆಚ್​ಡಿಕೆ!

Last Updated : May 26, 2023, 11:49 PM IST

ABOUT THE AUTHOR

...view details