ಕರ್ನಾಟಕ

karnataka

ETV Bharat / state

ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದಲೇ ದೊಡ್ಡ ಮಟ್ಟದ ಮಳೆ ಅನಾಹುತ: ಸಿದ್ದರಾಮಯ್ಯ ವಾಗ್ದಾಳಿ

ಎಲ್ಲ ರಾಜ್ಯಗಳಿಗೆ ಮುನ್ಸೂಚನೆ ಕೊಟ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ಕೊಟ್ಟಿತ್ತು. ಆದರೂ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಇಷ್ಟು ದೊಡ್ಡ ಮಟ್ಟದ ಅನಾಹುತ ಸಂಭವಿಸಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

siddaramaiah-lashed-out-at-state-government-over-rain-disaster
ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದಲೇ ದೊಡ್ಡ ಮಟ್ಟದ ಮಳೆ ಅನಾಹುತ

By

Published : Sep 13, 2022, 9:13 PM IST

ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ಕೊಟ್ಟಿದ್ದರೂ ರಾಜ್ಯ ಸರ್ಕಾರ ಯಾವುದೇ ಪೂರ್ವ ಸಿದ್ದತೆಗಳನ್ನು ಕೈಗೊಳ್ಳಲಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯದಲ್ಲಿ ಅತಿವೃಷ್ಟಿ ಕುರಿತಂತೆ ನಿಯಮ 69ರಡಿ ಮಾತನಾಡಿದ ಅವರು, ಈ ಬಾರಿ ಮಳೆಗಾಲದಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಲ್ಲ ರಾಜ್ಯಗಳಿಗೆ ಮುನ್ಸೂಚನೆ ಕೊಟ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ಕೊಟ್ಟಿತ್ತು. ಆದರೂ, ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಇಷ್ಟು ದೊಡ್ಡ ಮಟ್ಟದ ಅನಾಹುತ ಸಂಭವಿಸಿದೆ ಎಂದು ಟೀಕಿಸಿದರು.

ಸರ್ಕಾರದ ಬೇಜವಾಬ್ದಾರಿಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 20 ಜಿಲ್ಲೆಗಳಲ್ಲಿ ಪ್ರವಾಹ ಬಂದು ರೈತರ ಬೆಳೆಗಳು, ಮನೆ ಕುಸಿದು, ಜನ-ಜಾನುವಾರುಗಳು ಮೃತಪಟ್ಟಿವೆ. ಸರ್ಕಾರ ಮುಂಜಾಗ್ರತೆ ಕ್ರಮ ಕೈಗೊಂಡಿದ್ದರೆ, ಈ ಸಮಸ್ಯೆ ಉಂಟಾಗುತ್ತಿರಲಿಲ್ಲ.

ಮುಂದಿನ ದಿನಗಳಲ್ಲಿ ಭೀಕರ ಸಮಸ್ಯೆ ಉಂಟಾಗಬಹುದೆಂದು ಹವಾಮಾನ ಇಲಾಖೆ ಮುನ್ನಚ್ಚರಿಕೆ ಕೊಟ್ಟಿತ್ತು. ಈ ಕುರಿತಂತೆ ನಾನು ಕೂಡ ಸರ್ಕಾರಕ್ಕೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದೆ. ಕಳೆದ ವರ್ಷವು ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಸದನದ ಗಮನ ಸೆಳೆದರು.

ಸರ್ಕಾರ ಯಾವ ಪರ್ಯಾಯ ಕ್ರಮ ಕೈಗೊಂಡಿದೆ?:ಅತಿವೃಷ್ಟಿಯಿಂದ ಒಟ್ಟಾರೆ ಭತ್ತದ ಉತ್ಪಾದನೆಯಲ್ಲಿ ಶೇ.5.6ರಷ್ಟು ರಾಗಿ ಶೇ.12, ಕಡಲೆ ಶೇ.19.2, ಶೇಂಗಾ ಶೇ.9.6, ಸೋಯಾಬೀನ್ ಶೇ.20.6ರಷ್ಟು ಕಡಿಮೆ ಉತ್ಪಾದನೆಯಾದರೆ ಸರ್ಕಾರ ಯಾವ ಪರ್ಯಾಯ ಕ್ರಮ ಕೈಗೊಂಡಿದೆ?. ಜೋಳ ಶೇ.24.5, ಕಬ್ಬು ಶೇ.6.1 ಹಾಗೂ ಹತ್ತಿ ಬೆಳೆ ಹೆಚ್ಚಾಗಬಹುದೆಂದು ಹವಾಮಾನ ತಜ್ಞರು ಹೇಳಿದ್ದಾರೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿ, ಬಯಲು ಸೀಮೆಯಲ್ಲಿ ವ್ಯಾಪಕ ಮಳೆಯಾಗಿದೆ ಎಂದು ಹೇಳಿದರು.

ಕಳೆದ ವರ್ಷ ಪ್ರವಾಹ ಉಂಟಾಗಿ ಅನೇಕ ಕಡೆ ಬೆಳೆ ಕೊಚ್ಚಿ ಹೋಗಿ, ಮನೆಗಳು ಉರುಳಿ ಬಿದ್ದಿವೆ. ಸರ್ಕಾರ ಈವರೆಗೂ ಸಮೀಕ್ಷೆಯನ್ನೂ ನಡೆಸಲಿಲ್ಲ. ಅವರಿಗೆ ಒಂದು ವರ್ಷವಾದರೂ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದರು.

ಈ ವೇಳೆ, ಕಂದಾಯ ಸಚಿವ ಆರ್​ ಅಶೋಕ್ ಮಾತನಾಡಿ, ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ. ನಾನು ಬೆಳೆಹಾನಿ ಸಮೀಕ್ಷೆ ನಡೆಸಿ ಯಾರ್ಯಾರಿಗೆ ಎಷ್ಟೆಷ್ಟು ನಷ್ಟವಾಗಿದೆಯೋ ಅಂತಹ ಪಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡಿದ್ದೇನೆ ಎಂದರು.

ಇದನ್ನೂ ಓದಿ:ಒಂದೂವರೆ ಅಡಿ ನೀರಲ್ಲಿ ಬೋಟ್​ನಲ್ಲಿ ಹೋದರಲ್ಲ ಪುಣ್ಮಾತ್ಮರು ಎಂದ ಸಿಎಂ: ನನ್ನ ಸ್ವಂತ ಬೋಟ್​ನಲ್ಲಿ ಹೋಗಿಲ್ಲ ಎಂದ ಸಿದ್ದು

ಇಡೀ ದೇಶದಲ್ಲಿ ಎನ್​ಡಿಆರ್​​ಎಫ್ ನಿಯಮಾವಳಿಯನ್ನು ಮೀರಿ ಅತಿಹೆಚ್ಚು ಪರಿಹಾರ ನೀಡಿದ ಏಕೈಕ ಸರ್ಕಾರ ಕರ್ನಾಟಕ. ಇದಕ್ಕೆ ನೀವು ನಮಗೆ ಅಭಿನಂದನೆ ಸಲ್ಲಿಸಬೇಕು ಎಂದು ಅಶೋಕ್ ಹೇಳಿದರು. ಇದನ್ನು ಒಪ್ಪದ ಸಿದ್ದರಾಮಯ್ಯ, ಅನೇಕ ಕಡೆ ಮನೆಗಳನ್ನು ಕಟ್ಟಿಕೊಟ್ಟಿಲ್ಲ. ಮಳೆ ಹಾನಿ ಪರಿಹಾರ ಪಡೆಯಲು ಜನರು ಇಲಾಖೆಯಿಂದ ಇಲಾಖೆಗೆ ಅಲೆಯುತ್ತಿದ್ದಾರೆ ಇದು ನಿಮ್ಮ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಕಿಡಿಕಾರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಹಿಂದಿನ ಯಾವುದೇ ಸರ್ಕಾರಗಳು ಕೊಡದಿರುವಷ್ಟು ಪರಿಹಾರವನ್ನು ನಾವು ಕೊಟ್ಟಿದ್ದೇವೆ. ಎಸ್​ಡಿಆರ್​ಎಫ್ ,ಎನ್​ಡಿಆರ್​ಎಫ್ ನಿಯಮಾವಳಿಯನ್ನು ಮೀರಿ ಹೆಚ್ಚಿನ ಪರಿಹಾರ ನೀಡಿದ ಏಕೈಕ ರಾಜ್ಯ ಎಂದರೆ ಕರ್ನಾಟಕ. ನಿಮ್ಮ ಸರ್ಕಾರದ ಅವಧಿಯಲ್ಲಿ ಪರಿಹಾರ ಕೊಟ್ಟಿದ್ದರೆ ಈ ಪರಿಸ್ಥಿತಿ ಬರುತ್ತಿತ್ತೇ ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ:ನಾನು ಒಮ್ಮೊಮ್ಮೆ ಸುಳ್ಳು ಹೇಳುತ್ತೇನೆ, ನೂರಕ್ಕೆ ನೂರು ಪ್ರಾಮಾಣಿಕನಲ್ಲ: ಸದನದಲ್ಲಿ ಸಿದ್ದರಾಮಯ್ಯ ಹೇಳಿಕೆ

ABOUT THE AUTHOR

...view details