ಬೆಂಗಳೂರು:ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜನರ ಬದುಕು ನರಕ ಸದೃಶವಾಗಿದೆ. ಮುಖ್ಯಮಂತ್ರಿಗಳು ಮಾತ್ರ ಇದಕ್ಕೆಲ್ಲ ಹಿಂದಿನ ಸರ್ಕಾರಗಳು ಕಾರಣ ಎಂದು ಓಡಾಡುತ್ತಿದ್ದಾರೆ. ಸರ್ಕಾರ ಇಂತಹ ಬೇಜವಾಬ್ಧಾರಿ ಆಡಳಿತವನ್ನು ನಿಲ್ಲಿಸಿ ನಾಗರಿಕರಿಗೆ ನೆಮ್ಮದಿ ನೀಡಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಬೆಂಗಳೂರಿನ ಮಳೆ ಅನಾಹುತಗಳಿಗೆ ಹಿಂದಿನ ಸರ್ಕಾರಗಳು ಕಾರಣ ಎಂದು ಪದೇ ಪದೆ ಹೇಳಿಕೆ ಕೊಡುತ್ತಿದ್ದಾರೆ. ಬೊಮ್ಮಾಯಿಗೆ ಕೆಲವೇ ಕೆಲವು ಅಂಶಗಳನ್ನು ನೆನಪಿಸಬಯಸುತ್ತೇನೆ ಎಂದು ವಿವರವಾಗಿ ಹೇಳಿದ್ದಾರೆ.
ಎಟಿ ರಾಮಸ್ವಾಮಿಯವರು ಬೆಂಗಳೂರಿನಲ್ಲಿ 11,980 ಎಕರೆ ಭೂಮಿ ಒತ್ತುವರಿಯಾಗಿತ್ತು ಎಂದು ವರದಿ ನೀಡಿದ್ದರು. ಇದರಲ್ಲಿ 11,680 ಎಕರೆ ಭೂಮಿಯನ್ನು ನಮ್ಮ ಸರ್ಕಾರದ ಅವಧಿಯಲ್ಲಿ ತೆರವುಗೊಳಿಸಿದ್ದೆವು. ರಾಮಸ್ವಾಮಿಯವರು ಅತಿಕ್ರಮಣವಾಗಿದೆಯೆಂದು ಹೇಳಿದ ಜಾಗವನ್ನು ತೆರವುಗೊಳಿಸುವುದರ ಜೊತೆಗೆ 7 ಸಾವಿರ ಎಕರೆಗಳನ್ನು ಹೆಚ್ಚುವರಿಯಾಗಿ ತೆರವುಗೊಳಿಸಿದ್ದೆವು. ನಾವು ತೆರವುಗೊಳಿಸಿದ್ದ ಜಮೀನಿನ ಅಂದಾಜು ಮೌಲ್ಯ 4 ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜು ಮಾಡಲಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನ ಈ ದುಸ್ಥಿತಿಗೆ ಕಾಂಗ್ರೆಸ್ ದುರಾಡಳಿತವೇ ಕಾರಣ: ಸಿಎಂ ಬೊಮ್ಮಾಯಿ
ಅಲ್ಲದೇ, ಹಲವು ಸಂಘ ಸಂಸ್ಥೆಗಳಿಗೆ ನೀಡಿದ್ದ ಜಮೀನುಗಳ ಮಂಜೂರಾತಿ ನಿಯಮ ಉಲ್ಲಂಘಿಸಿದ್ದವರಿಂದಲೂ ಜಮೀನನ್ನು ವಾಪಸ್ ಪಡೆದಿದ್ದೇವೆ. ಅಪೊಲೊ ಆಸ್ಪತ್ರೆಯಿಂದ 5 ಎಕರೆ, ರಾಷ್ಟ್ರೋತ್ಥಾನ ಪರಿಷತ್‍ನಿಂದ 10 ಎಕರೆ, ಮಿಥಿಕ್ ಸೊಸೈಟಿ ಸೇರಿದಂತೆ ಹಲವರಿಂದ ಹಿಂಪಡೆದಿದ್ದೆವು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗೋಮಾಳ, ಕೆರೆ, ಕಟ್ಟೆ, ಕುಂಟೆ, ಸರ್ಕಾರಿ ಖರಾಬು, ಗ್ರಾಮಠಾಣ, ಗುಂಡುತೋಪು, ಸ್ಮಶಾನ ಸೇರಿದಂತೆ ಸುಮಾರು 1.23 ಲಕ್ಷ ಎಕರೆ ಭೂಮಿ ಸರ್ಕಾರಕ್ಕೆ ಸೇರಿದ್ದಾಗಿದೆ ಎಂಬ ಮಾಹಿತಿಯನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಬಯಸುತ್ತೇನೆ ಎಂದು ತಿಳಿಸಿದ್ದಾರೆ.
ನಾವು ಒತ್ತುವರಿಯನ್ನಷ್ಟೆ ತೆರವುಗೊಳಿಸಿರಲಿಲ್ಲ. ಸರ್ಕಾರಕ್ಕೆ ಪಡೆದ ಜಮೀನನ್ನು ಸದುಪಯೋಗ ಪಡಿಸಿಕೊಳ್ಳಲು ಯೋಜಿಸಿದ್ದೆವು. ಬಡವರಿಗಾಗಿ 1 ಲಕ್ಷ ಮನೆ ಕಟ್ಟಲು 1,500 ಎಕರೆ ಭೂಮಿಯನ್ನು ವಸತಿ ಇಲಾಖೆಗೆ ನೀಡಲಾಗಿತ್ತು. ಸೋಮಣ್ಣನವರು ಇತ್ತೀಚೆಗೆ ಹಾಗೆ ಯಾವುದೇ ಜಮೀನು ಕೊಟ್ಟಿರಲಿಲ್ಲ ಎಂದು ಹೇಳಿದ್ದರು. ಅವರೂ ಸಹ ದಾಖಲೆಗಳನ್ನು ತೆಗೆದು ನೋಡಲಿ, ವಾಸ್ತವಾಂಶ ಏನೆಂದು ಅರ್ಥವಾಗುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಮುಲಾಜಿಲ್ಲದೇ ಒತ್ತುವರಿ ತೆರವು:ಸರ್ಕಾರದಿಂದ 10 ಲಕ್ಷ ಸಸಿಗಳನ್ನು ನೆಡಲು ಬಿಬಿಎಂಪಿ, ಬಿಡಿಎಗಳಿಗೆ 1,618 ಎಕರೆ ಜಮೀನನ್ನು ನೀಡಲಾಗಿತ್ತು. ಉಳಿದಂತೆ ವಿವಿಧ ಸಮುದಾಯಗಳಿಗೆ ಹಾಗೂ ಹೆಚ್ಐವಿ ಪೀಡಿತರಿಗೆ ವಸತಿ ಕಲ್ಪಿಸಲು 300 ಎಕರೆ ಜಮೀನು ನೀಡಲಾಗಿತ್ತು. ಸರ್ಕಾರಿ ಆಸ್ಪತ್ರೆ, ಶಾಲೆ, ಕಾಲೇಜು, ಪೊಲೀಸ್ ಠಾಣೆಯಂತಹ ಸಾರ್ವಜನಿಕ ಉದ್ದೇಶಗಳಿಗೆ 3,604 ಎಕರೆ ಭೂಮಿಯನ್ನು ನೀಡಲಾಗಿತ್ತು. ಉಳಿದ ಜಮೀನಿನಲ್ಲಿ ರಾಜಕಾಲುವೆ, ಕೆರೆ, ಕಟ್ಟೆ, ಅರಣ್ಯ ಮುಂತಾದವುಗಳಿದ್ದವು. ನಮ್ಮ ಸರ್ಕಾರದ ಅವಧಿಯಲ್ಲಿ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿದ್ದೆವು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
2014ರ ಸೆಪ್ಟೆಂಬರ್ 26ರಂದು ಒಂದೇ ದಿನ ಬಿದ್ದ ಮಳೆಯ ಪ್ರಮಾಣ 132 ಮಿ.ಮೀಟರುಗಳಷ್ಟಿತ್ತು. ಆದರೆ ಮೊನ್ನೆ ಭಾನುವಾರ ಬಿದ್ದ ಮಳೆಯ ಪ್ರಮಾಣ 131.6 ಮಿಮೀ ಮಾತ್ರ. ಆದರೂ ಬೆಂಗಳೂರಿನ ರಸ್ತೆಗಳಲ್ಲಿ ದೋಣಿಗಳನ್ನು ಓಡಾಡಿಸಬೇಕಾದ ಪರಿಸ್ಥಿತಿ ಬಂದಿತ್ತು. ಐಟಿ ಕಂಪನಿಗಳು ಸರ್ಕಾರಕ್ಕೆ ಪತ್ರ ಬರೆದು ವ್ಯವಸ್ಥೆ ಸರಿಪಡಿಸದಿದ್ದರೆ ಹೊರ ರಾಜ್ಯಗಳಿಗೆ ಹೋಗಬೇಕಾಗುತ್ತದೆ ಎಂದವು. ಸರ್ಕಾರದ ಆರೋಗ್ಯ ಸಚಿವರು ಪತ್ರ ಬರೆದ ಐಟಿ ಸಂಸ್ಥೆಗಳ ಮುಖ್ಯಸ್ಥರಿಗೆ ಧಮಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ತಿಳಿಸಿದರು.
ಒತ್ತುವರಿ ತೆರವು ವಿರುದ್ಧ ಪ್ರತಿಭಟಿಸಿದ್ದ ಬಿಜೆಪಿ: ಬಾಣಸವಾಡಿ ಕೆರೆಯ ಒತ್ತುವರಿ ತೆರವು ಮಾಡುವಾಗ ಮಾಜಿ ಸಚಿವ ಸುರೇಶ್ ಕುಮಾರ್ ಅವರು ಏನು ಹೇಳಿದ್ದರು ಎಂದು ನೆನಪಿಸಿಕೊಳ್ಳಬೇಕು. 'ಸರ್ಕಾರ ಹುಚ್ಚಾಟ ನಡೆಸುತ್ತಿದೆ, ಜನರು ಸರ್ಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ, ಆದರೂ ಈ ರೀತಿ ಮಾಡಿರುವುದು ಸರಿಯಲ್ಲ. ಸರ್ಕಾರ ಮನೆ ಒಡೆಯುವ ಪ್ರವೃತ್ತಿ ನಿಲ್ಲಿಸಬೇಕು' ಎಂದು ಸುರೇಶ್ ಕುಮಾರ್ ಹೇಳಿದ್ದರು. ಅಲ್ಲದೇ, ಪ್ರತಿಭಟನೆಯ ನೇತೃತ್ವವನ್ನು ಸುರೇಶ್ ಕುಮಾರ್ ಅವರೇ ವಹಿಸಿಕೊಂಡಿದ್ದರು.