ಮೈಸೂರು:''ಸರ್ಕಾರ ಸಾಮಾಜಿಕ ತಳಹದಿಯ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಸಚಿವ ಸಂಪುಟದಲ್ಲಿ ಎಲ್ಲಾ ಸಮಾಜಗಳಿಗೂ ಆದ್ಯತೆ ನೀಡಲಾಗಿದೆ. ಸಂಪುಟದಲ್ಲಿ 7 ಮಂದಿ ವೀರಶೈವ ಲಿಂಗಾಯತ ಸಚಿವರಿದ್ದಾರೆ. ಸಿಎಂ ಸಿದ್ದರಾಮಯ್ಯ ಎಲ್ಲಾ ಸಮುದಾಯವನ್ನು ಒಟ್ಟಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಅವರು ಕೇವಲ ಕುರುಬ ಸಮಾಜವನ್ನು ಮಾತ್ರ ಓಲೈಕೆ ಮಾಡುತ್ತಿಲ್ಲ'' ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ. ಮಹಾದೇವಪ್ಪ ಹೇಳಿದರು.
ಮೈಸೂರು ಅರಮನೆಯ ಆಡಳಿತ ಮಂಡಳಿಯ ಕಚೇರಿಯಲ್ಲಿ ಇಂದು (ಮಂಗಳವಾರ) ದಸರಾದ ಸಾಂಸ್ಕೃತಿಕ ಉಪ ಸಮಿತಿಯ ಪೋಸ್ಟರ್ ಬಿಡುಗಡೆ ಮಾಡಿ, ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯದ ಅಧಿಕಾರಿಗಳನ್ನು ಕಾಂಗ್ರೆಸ್ ಸರ್ಕಾರದಲ್ಲಿ ಕಡೆಗಣನೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದರು.
''ಹುಬ್ಬಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣಗಳನ್ನು ವಾಪಸ್ ಪಡೆಯುವ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿ ತೀರ್ಮಾನ ಮಾಡುತ್ತದೆ. ಯಾವ್ಯಾವ ರಾಜಕೀಯ ಪ್ರೇರಿತ ಕೇಸ್ಗಳು ಎಂಬ ಬಗ್ಗೆ ಪರಿಶೀಲನೆ ನಡೆಸಿ, ಅವುಗಳನ್ನು ಕ್ಯಾಬಿನೆಟ್ ಸಬ್ ಕಮಿಟಿ ವಾಪಸ್ ಪಡೆಯಲು ಶಿಫಾರಸು ನೀಡುತ್ತದೆ. ಮೆರಿಟ್ ಆಧಾರದ ಮೇಲೆ ಕ್ಯಾಬಿನೆಟ್ ಕಮಿಟಿ ಅದನ್ನು ತೀರ್ಮಾನ ಮಾಡುತ್ತದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ಕೇಸ್ಗಳನ್ನು ವಾಪಸ್ ಪಡೆಯುವುದಿಲ್ಲ'' ಎಂದು ಸಚಿವ ಮಹಾದೇವಪ್ಪ ಸ್ಪಷ್ಟಪಡಿಸಿದರು.
ರಾಜ್ಯದಲ್ಲೂ ಜಾತಿ ಗಣತಿ ವರದಿ ಬಿಡುಗಡೆಯಾಗಬೇಕು: ''ಬಿಹಾರದಲ್ಲಿ ಅಲ್ಲಿನ ಮುಖ್ಯಮಂತ್ರಿ ಜಾತಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ಅದೇ ರೀತಿ ರಾಜ್ಯದಲ್ಲೂ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಬೇಕು. ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾತಿ ಗಣತಿ ವರದಿ ನೀಡಲು ಸಮಿತಿ ರಚಿಸಲಾಗಿತ್ತು. ಸಮಾಜದಲ್ಲಿ ಪ್ರತಿಯೊಂದು ಸಮುದಾಯದ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ ತಿಳಿಯಲು ಜಾತಿ ಗಣತಿ ವರದಿ ಬಿಡುಗಡೆ ಮಾಡಲೇಬೇಕು'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ದಸರಾ ವೆಬ್ಸೈಟ್ಗೆ ಚಾಲನೆ:ದಸರಾ ಉದ್ಘಾಟನೆಗೆ ಇನ್ನೂ 12 ದಿನ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆಯ ಆವರಣದಲ್ಲಿರುವ ಅರಮನೆ ಆಡಳಿತ ಮಂಡಳಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ಅವರು, ದಸರಾ ಸಾಂಸ್ಕೃತಿಕ ಉಪ ಸಮಿತಿಯ ಪೋಸ್ಟರ್ ಬಿಡುಗಡೆ ಹಾಗೂ ದಸರಾ ವೆಬ್ಸೈಟ್ಗೆ ಚಾಲನೆ ನೀಡಿದರು. ''ಈ ಬಾರಿ 190ಕ್ಕೂ ಹೆಚ್ಚು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದ್ದು, ಆದ್ದರಿಂದ ಈ ಬಾರಿ ದಸರಾವನ್ನು ಅದ್ಧೂರಿಯೂ ಅಲ್ಲ, ಸರಳವೂ ಅಲ್ಲ, ಸಾಂಪ್ರದಾಯಿಕವಾಗಿ ಮಾಡಲು ತೀರ್ಮಾನಿಸಲಾಗಿದೆ'' ಎಂದು ಸಚಿವ ಮಹದೇವಪ್ಪ ಮಾಹಿತಿ ನೀಡಿದರು.