ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದಕ್ಕೆ ಇಂದು ಸಹ ಒಂದು ನಿದರ್ಶನ ಲಭಿಸಿತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ನಾಯಕರು ಕಾಂಗ್ರೆಸ್ ಶಕ್ತಿ ಕೇಂದ್ರವಾಗಿ ಗುರುತಿಸಿಕೊಳ್ಳುತ್ತಲೇ ಬಂದಿದ್ದಾರೆ. ಒಮ್ಮೊಮ್ಮೆ ಒಬ್ಬೊಬ್ಬರ ಕೈ ಮೇಲಾಗುತ್ತಾ ಇರುತ್ತದೆ. ವಲಸಿಗರಾಗಿರುವ ಸಿದ್ದರಾಮಯ್ಯ ಹಾಗೂ ಮೂಲ ಕಾಂಗ್ರೆಸ್ಸಿಗರಾಗಿರುವ ಡಿ.ಕೆ.ಶಿವಕುಮಾರ್ ನಡುವೆ ಆಗಾಗ ಪ್ರತಿಷ್ಠೆ ಪಣಕ್ಕಿಡುವ ಸನ್ನಿವೇಶಗಳು ಗೋಚರಿಸುತ್ತಿರುತ್ತವೆ. ಇಂದೂ ಸಹ ಅಂಥದ್ದೇ ಒಂದು ಸನ್ನಿವೇಶ ನಿರ್ಮಾಣವಾಯಿತು.
ಬಿಜೆಪಿಯಿಂದ ಕಾಂಗ್ರೆಸ್ಗೆ ವಲಸೆ ಬಂದಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಕೈ ನಾಯಕರ ಜೊತೆ ಸಮಾಲೋಚನೆ ನಡೆಸಲು ಆಗಮಿಸಿದ ಸ್ಥಳ ವಿಶೇಷವಾಗಿ ಗಮನ ಸೆಳೆಯಿತು. ಕಾಂಗ್ರೆಸ್ ಪಕ್ಷದಲ್ಲಿ ಈಗಲೂ ಸಿದ್ದರಾಮಯ್ಯ ಅವರೇ ನಿರ್ಣಾಯಕ ನಾಯಕ. ಪಕ್ಷದಲ್ಲಿ ಇರುವ ನಾಯಕರು ಹಾಗೂ ಹೊರಗಿನಿಂದ ಬರುವವರು ಇವರನ್ನೇ ನಂಬಿಕೊಂಡು ಬರುತ್ತಿದ್ದಾರೆ ಎಂಬುದು ಇಂದು ಸಾಬೀತಾಯಿತು.
ಬಿಜೆಪಿ ಪಕ್ಷವನ್ನ ತ್ಯಜಿಸಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದ ಲಕ್ಷ್ಮಣ್ ಸವದಿ ಮೊದಲು ಮಾತುಕತೆಗೆ ಆಗಮಿಸಿದ್ದು ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ. ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಲಕ್ಷ್ಮಣ್ ಸವದಿ ಭೇಟಿ ನೀಡಿದ ಸಂದರ್ಭ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗಮಿಸಿ ಮಾತುಕತೆ ನಡೆಸಿದರು. ಸಭೆ ನಡೆಸಲು ಬೇರೆ ಬೇಕಾದಷ್ಟು ಸ್ಥಳ ಇದ್ದರೂ ಪ್ರತಿಪಕ್ಷ ನಾಯಕರ ನಿವಾಸಕ್ಕೆ ಸವದಿ ತೆರಳಿರುವುದು ಗಮನ ಸೆಳೆಯಿತು.