ಬೆಂಗಳೂರು: ಪ್ರವಾಹದ ಭೀತಿ ಎದುರಿಸುತ್ತಿರುವ ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಾಗಲಕೋಟೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ಬಾದಾಮಿ ಕ್ಷೇತ್ರದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಸೂಚನೆ - ಬಾದಾಮಿ ನೆರೆ ಪರಿಹಾರ
ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಾಗಲಕೋಟೆ ಜಿಲ್ಲಾಧಿಕಾರಿ ಮತ್ತು ಬಾದಾಮಿ ತಹಶೀಲ್ದಾರ್ ಜೊತೆ ದೂರವಾಣಿ ಮೂಲಕ ಮಾತನಾಡಿ ಪ್ರವಾಹದ ಕುರಿತು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ಕ್ಯಾ.ರಾಜೇಂದ್ರ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಿದ್ದರಾಮಯ್ಯ, ಈಗಾಗಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಸದ್ಯಕ್ಕೆ ಪ್ರವಾಹದ ಸಾಧ್ಯತೆ ಇಲ್ಲ, ಆದರೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು.
ಇದೇ ವೇಳೆ ಬಾದಾಮಿ ತಹಶೀಲ್ದಾರ್ ಜೊತೆಗೂ ಸಿದ್ದರಾಮಯ್ಯ ದೂರವಾಣಿ ಮೂಲಕ ಮಾತನಾಡಿ, ಮುಳುಗಡೆ ಭೀತಿ ಎದುರಿಸುತ್ತಿರುವ ಗ್ರಾಮಗಳ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದರು. ಜೊತೆಗೆ
ಕೊರೊನಾ ಕುರಿತಾದ ಮಾಹಿತಿಯನ್ನು ತಹಶೀಲ್ದಾರ್ ರಿಂದ ಪಡೆದುಕೊಂಡ ಅವರು, ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಲೋಪವಾಗದಂತೆ ನೋಡಿಕೊಳ್ಳಲು ತಿಳಿಸಿದರು.