ಕರ್ನಾಟಕ

karnataka

ETV Bharat / state

'ಎನ್​ಡಿಆರ್​ಎಫ್​ ನಿಯಮ ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪ ಹಾನಿಗೆ ಕೂಡಲೇ ಪರಿಹಾರ ನೀಡಿ' - ಎನ್​ಡಿಆರ್​ಎಫ್​ ನಿಯಮ ತಿದ್ದುಪಡಿಗೆ ಸಿದ್ದರಾಮಯ್ಯ ಒತ್ತಾಯ

ಕಳೆದ ಎರಡು ವರ್ಷಗಳಿಂದ ಎಲ್ಲ ಉತ್ಪನ್ನಗಳ ಬೆಲೆ ದುಪ್ಪಟ್ಟಾಗಿವೆ. ಹಣದುಬ್ಬರ ದಾಖಲೆ ಮಟ್ಟಕ್ಕೆ ತಲುಪಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಎನ್​ಡಿಆರ್​ಎಫ್​ ನಿಯಮಗಳನ್ನು ಪರಿಷ್ಕರಿಸಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ
ಸಿದ್ದರಾಮಯ್ಯ

By

Published : Jun 21, 2022, 6:15 PM IST

ಬೆಂಗಳೂರು:ಎನ್​ಡಿಆರ್​ಎಫ್​​ ನಿಯಮಗಳನ್ನು ಕೂಡಲೇ ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಸಮರ್ಪಕವಾದ ಪರಿಹಾರ ನೀಡುವಂತೆ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸಿದ್ದರಾಮಯ್ಯ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಪರಿಹಾರವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಬಿಡುಗಡೆ ಮಾಡುತ್ತದೆ. ಪ್ರತಿ 5 ವರ್ಷಗಳಿಗೆ ಒಮ್ಮೆ ಎನ್​ಡಿಆರ್​ಎಫ್​ ನಿಯಮಗಳನ್ನು ತಿದ್ದುಪಡಿ ಮಾಡಿ ರೈತರ ಬೆಳೆಗಳಿಗೆ ಇನ್ಫುಟ್ ಸಬ್ಸಿಡಿಯ ಮೊತ್ತ, ಮೀನುಗಾರರ ದೋಣಿಗಳಿಗೆ ಆದ ಹಾನಿ, ಜನ ಜಾನುವಾರುಗಳಿಗೆ ಉಂಟಾದ ತೊಂದರೆ, ಮನೆ ಹಾನಿ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಆದ ನಷ್ಟಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಲಾಗುತ್ತದೆ. ಆದರೆ 2015-20ಕ್ಕೆ ಅನ್ವಯವಾಗುವಂತೆ ರೂಪಿಸಿದ ನಿಯಮಗಳನ್ನು 2015 ರಲ್ಲಿ ಪರಿಷ್ಕರಿಸಲಾಗಿತ್ತು. ಸಹಜವಾಗಿ ಇದು 2020 ರಲ್ಲಿ ಮತ್ತೆ ಪರಿಷ್ಕರಿಸಬೇಕಾಗಿತ್ತು. ಇದುವರೆಗೂ ಪರಿಷ್ಕರಣೆ ಮಾಡಿಲ್ಲ ಎಂದಿದ್ದಾರೆ.

ಕಳೆದ ಎರಡು ವರ್ಷಗಳಿಂದ ಎಲ್ಲ ಉತ್ಪನ್ನಗಳ ಬೆಲೆ ದುಪ್ಪಟ್ಟಾಗಿವೆ. ಹಣದುಬ್ಬರ ದಾಖಲೆ ಮಟ್ಟಕ್ಕೆ ತಲುಪಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಎನ್​ಡಿಆರ್​ಎಫ್​ ನಿಯಮಗಳನ್ನು ಪರಿಷ್ಕರಿಸಿಲ್ಲ. ಪ್ರಸ್ತುತ ಒಂದು ಎಕರೆ ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಬೆಳೆದ ಬೆಳೆ ಶೇ. 33ಕ್ಕಿಂತ ಹೆಚ್ಚು ಹಾನಿಯಾದರೆ ಸಿಗುವ ಪರಿಹಾರ ಕೇವಲ 2720 ರೂಪಾಯಿ ಮಾತ್ರ. ಅದರಲ್ಲೂ ಗರಿಷ್ಠ 2.5 ಹೆಕ್ಟೇರ್​ಗೆ ಅಂದರೆ 6800 ಮಾತ್ರ. ಪ್ರತಿ ಗುಂಟೆಗೆ ಕೇವಲ 68 ರೂಪಾಯಿ ಸಿಗುತ್ತದೆ. ಆದರೆ, ಒಂದು ಎಕರೆ ರಾಗಿ, ಜೋಳ ಬೆಳೆಯಲು ಕನಿಷ್ಠ 25000 ರೂಪಾಯಿ ಖರ್ಚು ತಗಲುತ್ತದೆ.

ರೈತ ಪರ ಕಾಳಜಿ ಎಂದು ಅರ್ಥ ಮಾಡಿಕೊಳ್ಳಬೇಕು:ಈ ಮೊತ್ತ ಪರಿಷ್ಕರಣೆಯಾಗಲೇಬೇಕಾಗಿದೆ. ನಾನು ವಿಧಾನಸಭೆಯ ಅಧಿವೇಶನಗಳಲ್ಲಿ ಕನಿಷ್ಠ 25000 ರೂ ಕೊಡಿ ಎಂದು ಒತ್ತಾಯಿಸಿದ್ದೆ. ಕೇಂದ್ರ ಸರ್ಕಾರ ಈ ಮೊತ್ತವನ್ನು ಪರಿಷ್ಕರಣೆ ಮಾಡದ ಕಾರಣದಿಂದ ಕಳೆದ 2 ವರ್ಷಗಳಿಂದ ರೈತರಿಗೆ ವಿಪರೀತ ಹಾನಿಯಾಗಿದೆ. ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಸಂಭವಿಸಿರುವ ನಷ್ಟದ ಪ್ರಮಾಣ ಒಂದು ಅಂದಾಜಿನ ಪ್ರಕಾರ 2 ಲಕ್ಷ ಕೋಟಿ ರೂಗಳಷ್ಟಾಗಬಹುದು. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮೊತ್ತ ಕೇವಲ 3965 ಕೋಟಿ ರೂ ಮಾತ್ರ. ರಾಜ್ಯದಲ್ಲಿ ಮೇ ತಿಂಗಳಿಂದ ನವೆಂಬರ್​ಗೆ ಸಂಭವಿಸಿದ ಪ್ರವಾಹದ ಹಾನಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾರ್ಚ್-2022 ರಲ್ಲಿ ಕೇವಲ 492 ಕೋಟಿ ಬಿಡುಗಡೆ ಮಾಡಿದೆ. ಇದು ಮೋದಿ ಸರ್ಕಾರದ ವೇಗ ಮತ್ತು ರೈತ ಪರ ಕಾಳಜಿ ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದಿದ್ದಾರೆ.

ಕೇಂದ್ರವು ರಾಜ್ಯವನ್ನು ಇನ್ನಷ್ಟು ಶೋಷಣೆ ಮಾಡಿತು: ಜನರು ಮತ್ತು ಪ್ರತಿಪಕ್ಷಗಳು ಪರಿಹಾರಕ್ಕಾಗಿ ಒತ್ತಡಗಳನ್ನು ತಂದಾಗ ರಾಜ್ಯ ಸರ್ಕಾರ 2391 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ರೈತರಿಗೆ ನೀಡಿತು. ಕೇಂದ್ರ ಸರ್ಕಾರ ನೀಡಬೇಕಾದ ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರ ನೀಡಬೇಕಾಯಿತು. ಆ ಮೂಲಕ ಕೇಂದ್ರವು ರಾಜ್ಯವನ್ನು ಇನ್ನಷ್ಟು ಶೋಷಣೆ ಮಾಡಿತು. ಕಳೆದ 3 ವರ್ಷಗಳಿಂದ ರಾಜ್ಯ ಸರ್ಕಾರ 3890 ಕೋಟಿ ರೂಗಳನ್ನು ರೈತರಿಗೆ, ವಸತಿ ಹಾನಿಯಾದವರಿಗೆ ನೀಡಿದೆ. ಇದಿಷ್ಟೂ ಸೇರಿದಂತೆ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರ ನೀಡಬೇಕಾಗಿತ್ತು.

ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಪರಿಹಾರ: ಏಕೆಂದರೆ, ಪರಿಹಾರ ನೀಡುವುದಕ್ಕೋಸ್ಕರವೇ ಕೇಂದ್ರದ ಬಜೆಟ್​ನಲ್ಲಿ ಹಣ ಮೀಸಲಿರಿಸಲಾಗುತ್ತದೆ. ಆದರೆ, ಕರ್ನಾಟಕಕ್ಕೆ ಕೊಡಬೇಕಾದಷ್ಟು ಪರಿಹಾರವನ್ನು ನೀಡದೆ ಅನ್ಯಾಯ ಮಾಡಿದೆ. ಆದ್ದರಿಂದ ನಾನು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದೇನೆಂದರೆ, ಮೊದಲು ಎನ್​ಡಿಆರ್​ಎಫ್​ ನಿಯಮಗಳಿಗೆ 2020 ರಿಂದಲೇ ಪೂರ್ವಾನ್ವಯವಾಗುವಂತೆ ತಿದ್ದುಪಡಿ ಮಾಡಿ ಬಾಕಿ ಪರಿಹಾರವನ್ನು ಬಿಡುಗಡೆ ಮಾಡಬೇಕು. ರೈತರಿಗೆ ನಷ್ಟವಾದ ಅಷ್ಟೂ ಹಣವನ್ನು ನಷ್ಟವಾದ ಅಷ್ಟೂ ಎಕರೆಗೆ ಪರಿಹಾರ ನೀಡುವ ಹಾಗೆ ತಿದ್ದುಪಡಿ ತರಬೇಕು. ಮನೆ ಕಳೆದುಕೊಂಡವರಿಗೆ, ಮೀನುಗಾರರಿಗೆ ಹಾಗೂ ಇತರೆ ಎಲ್ಲ ಬಾಧಿತರಿಗೆ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಪರಿಹಾರ ನೀಡುವಂತಾಗಬೇಕು ಎಂದಿದ್ದಾರೆ.

ಇದನ್ನೂ ಓದಿ:ಮಳಲಿ ವಿವಾದ: ಮಸೀದಿ ಹೆಸರು ನಮೂದಿಗೆ ತಡೆಯಾಜ್ಞೆ

For All Latest Updates

TAGGED:

ABOUT THE AUTHOR

...view details