ಬೆಂಗಳೂರು: ರಾಜ್ಯದಲ್ಲಿ ಕಳೆದ 11ವರ್ಷದಲ್ಲಿ ವಾಪಸ್ ಪಡೆದ ಕ್ರಿಮಿನಲ್ ಪ್ರಕರಣಗಳ ವಿವರ ನೀಡುವಂತೆ ಗೃಹ ಸಚಿವರಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, 2009 ರಿಂದ ಇದುವರೆಗೆ ವಿವಿಧ ವ್ಯಕ್ತಿ ಮತ್ತು ಸಂಘಟನೆಗಳಿಗೆ ಸಂಬಂಧಿಸಿದಂತೆ ವಾಪಸ್ ಪಡೆದ ಕ್ರಿಮಿನಲ್ ಪ್ರಕರಣಗಳ ವಿವರಗಳನ್ನು ಈ ಕೆಳಕಂಡ ನಮೂನೆಯಲ್ಲಿ ವಿಳಂಬಕ್ಕೆ ಆಸ್ಪದ ನೀಡದೆ ಅತ್ಯಂತ ಜರೂರಾಗಿ ವಿವರ ನೀಡುವಂತೆ ಒತ್ತಾಯಿಸಿದ್ದಾರೆ.
ಕಳೆದ 11 ವರ್ಷಗಳಲ್ಲಿ ವಾಪಸ್ ಪಡೆದ ಕ್ರಿಮಿನಲ್ ಪ್ರಕರಣಗಳ ಮಾಹಿತಿ ಕೋರಿದ ಸಿದ್ದರಾಮಯ್ಯ ತಮಗೆ ಬೇಕಿರುವ ವಿವರಗಳನ್ನು ತಾವೇ ಸಿದ್ಧಪಡಿಸಿರುವ ಪಟ್ಟಿಯ ಪ್ರಕಾರವೇ ನೀಡಬೇಕೆಂದು ಸಿದ್ದರಾಮಯ್ಯ ಕೋರಿದ್ದು, ಅದರಲ್ಲಿ 10 ನಮೂನೆಯನ್ನು ನೀಡಿದ್ದಾರೆ. ಅದರಲ್ಲಿ ಆರಂಭದಿಂದ ಕ್ರಮಸಂಖ್ಯೆ, ವ್ಯಕ್ತಿಯ ಹೆಸರು, ಸಂಘಟನೆಯ ಹೆಸರು, ಪ್ರಕರಣ ದಾಖಲಿಸಿದ ವರ್ಷ, ಪ್ರಕರಣ ದಾಖಲಿಸಲು ಕಾರಣ, ಯಾವ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ, ಪ್ರಕರಣ ಹಿಂಪಡೆದ ದಿನಾಂಕ ಮತ್ತು ಆದೇಶ, ಪ್ರಕರಣ ಹಿಂಪಡೆಯಲು ಕಾರಗಳೇನು? ಈ ಕುರಿತಂತೆ ಕಾನೂನು ಇಲಾಖೆ, ಎಜಿ ಅವರು ನೀಡಿರುವ ಅಭಿಪ್ರಾಯ ವಿವರಿಸುವಂತೆ ಕೋರಿದ್ದಾರೆ.
ಜನಪರ ಚಳವಳಿಗಳಲ್ಲಿ ಭಾಗಿಯಾದವರ ವಿರುದ್ಧ ದಾಖಲಾದ ಪ್ರಕರಣ ಹಿಂಪಡೆಯುವ ನೆಪದಲ್ಲಿ ತಮ್ಮವರ ರಕ್ಷಣೆಗೆ ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದ್ದು, ಇದೀಗ ಪ್ರತಿಪಕ್ಷದ ನಾಯಕರ ಮೂಲಕ ಇದಕ್ಕೆ ಮಾಹಿತಿಗಳನ್ನು ತರಿಸಿಕೊಳ್ಳಲು ಮುಂದಾಗಿದೆ.
ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೈಗೊಳ್ಳಬಹುದಾದ ಮತ್ತೊಂದು ಹೋರಾಟಕ್ಕೆ ಪಕ್ಷ ಮಾಹಿತಿ ಸಂಗ್ರಹ ಆರಂಭಿಸಿದೆ.