ಬೆಂಗಳೂರು:ಪ್ರಚಂಡ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯ ಸರ್ಕಾರಕ್ಕೆ ಇದೀಗ ಶತಕದ ಸಂಭ್ರಮ. ಪಂಚ ಗ್ಯಾರಂಟಿ ಭರವಸೆಯೊಂದಿಗೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನವೇ ಮೊದಲ ಆದ್ಯತೆಯಾಗಿದೆ.
ಹೌದು. ಭಾರಿ ಬಹುಮತದೊಂದಿಗೆ ರಾಜ್ಯದ ಗದ್ದುಗೆ ಏರಿದ ಕಾಂಗ್ರೆಸ್ ಸರ್ಕಾರದ ಮೊದಲ ಆದ್ಯತೆ 'ಪಂಚ ಗ್ಯಾರಂಟಿ'ಯ ಅನುಷ್ಠಾನ. ಶತಕದ ಆಡಳಿತ ಸಂಭ್ರಮದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಎದುರಾಯಿತು ಸಾಲು ಸಾಲು ಸವಾಲು. ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ನಡೆದ ಸಚಿವ ಸಂಪುಟ ಸಭೆಯಲ್ಲಿ ಚುನಾವಣೆಗೂ ಮೊದಲು ಆಶ್ವಾಸನೆ ನೀಡಿದ್ದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಲಾಯಿತು. ಸರ್ಕಾರ ಅಧಿಕಾರಕ್ಕೆ ಬಂದ 3 ವಾರಗಳಲ್ಲಿಯೇ ಗ್ಯಾರಂಟಿ ಯೋಜನೆಗಳ ಜಾರಿ ಪ್ರಾರಂಭಿಸಲಾಯಿತು. ಈ ನಡುವೆ ಸರ್ಕಾರ ಎದುರಿಸಿದ ಪ್ರಮುಖ ಸವಾಲುಗಳು ಹೀಗಿವೆ..
- ಅನುದಾನ ಹೊಂದಾಣಿಕೆಯ ಬೃಹತ್ ಸವಾಲು:5 ಗ್ಯಾರಂಟಿ ಯೋಜನೆ ಜಾರಿಗೆ ಸಿದ್ದರಾಮಯ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿರುವುದು ಅನುದಾನ. ಈ ಗ್ಯಾರಂಟಿಗಳಿಗೆ ವಾರ್ಷಿಕ 50,000 ಕೋಟಿ ರೂ. ಅನುದಾನ ಬೇಕಾಗಲಿದೆ. ಇಷ್ಟು ದೊಡ್ಡ ಪ್ರಮಾಣದ ಅನುದಾನ ಸಂಗ್ರಹ ಅಸಾಧ್ಯ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿದೆ. ಇದರಿಂದ ರಾಜ್ಯದ ಹಣಕಾಸು ಪರಿಸ್ಥಿತಿ ಬಿಗಡಾಯಿಸಲಿದೆ. ಜತೆಗೆ ದೊಡ್ಡ ಪ್ರಮಾಣದಲ್ಲಿ ಸಾಲದ ಮೊರೆ ಹೋಗುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದೆ. ಈ ಮಧ್ಯೆ ಕಾಂಗ್ರೆಸ್ ಸರ್ಕಾರಕ್ಕೆ ಪಂಚ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಅನಿವಾರ್ಯತೆಯಿತ್ತು.
ಸಿದ್ದರಾಮಯ್ಯ ಸರ್ಕಾರ ತನ್ನ ನೂರು ದಿನಗಳ ಆಡಳಿತದಲ್ಲಿ ಬಹುತೇಕ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸುವ ಕಸರತ್ತಿನಲ್ಲೇ ತೊಡಗಿತ್ತು. ಆದಾಯ ಸಂಗ್ರಹ ಮಿತಿ ಹೆಚ್ಚಿಸುವುದರ ಜತೆಗೆ ಬೇರೆ ಯಾವ ಮೂಲಗಳಿಂದ ಸಂಪನ್ಮೂಲ ಕ್ರೋಢೀಕರಣ ಸಾಧ್ಯ ಎಂಬ ಬಗ್ಗೆ ಹುಟುಕಾಟದಲ್ಲಿ ತೊಡಗಿದೆ. ಇತ್ತ ಇತರ ಇಲಾಖೆಗಳಿಗೆ ಅನುದಾನ ಕಡಿತ ಮಾಡಲಾಗಿದ್ದು, ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಕೊರತೆಯ ಆತಂಕ ಎದುರಾಗಿದೆ.
ಈಗಾಗಲೇ ಸ್ವಪಕ್ಷೀಯರೇ ಅನುದಾನ ಕೊರತೆ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ವಿಶೇಷ ಅನುದಾನಕ್ಕೆ ಕತ್ತರಿ ಹಾಕಲಾಗಿದ್ದು, ಸ್ವಪಕ್ಷೀಯರ ಅಸಮಾಧಾನ ತಣಿಸಿ, ಅಭಿವೃದ್ಧಿಗೂ ಚ್ಯುತಿ ಬಾರದಂತೆ ಪಂಚ ಗ್ಯಾರಂಟಿ ಜಾರಿಗೊಳಿಸುವ ಅನಿವಾರ್ಯತೆಯಲ್ಲೇ ಕಾಂಗ್ರೆಸ್ ಸರ್ಕಾರ 100 ದಿನಗಳ ಆಡಳಿತ ಪೂರೈಸಿದೆ. ಈಗಲೂ ಅನುದಾನ ಕೊರತೆ ಪಂಚ ಗ್ಯಾರಂಟಿಗಳ ಅನುಷ್ಠಾನಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ.
- ಅಂದಾಜು ಮೀರಿದ 'ಶಕ್ತಿ ಯೋಜನೆ' ವೆಚ್ಚ:ಸಿದ್ದರಾಮಯ್ಯ ಸರ್ಕಾರ ಜೂ.11ರಂದು ಪಂಚ ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯನ್ನು ಮೊದಲಿಗೆ ಅನುಷ್ಠಾನ ಮಾಡಿತು. ವಿಳಂಬ ಅನುಷ್ಠಾನ ವಿರುದ್ಧದ ಪ್ರತಿಪಕ್ಷಗಳ ಟೀಕೆಗಳ ಮಧ್ಯೆ ಸರ್ಕಾರ ತನ್ನ ಮೊದಲ ಪಂಚ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿತು. ಸಾರಿಗೆ ನಿಗಮಗಳ ಆರ್ಥಿಕ ಸಂಕಷ್ಟ, ಅನುದಾನ ಕೊರತೆಯ ಸವಾಲಿನ ಮಧ್ಯೆ ಯೋಜನೆ ಜಾರಿಯಾಗಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ 'ಶಕ್ತಿ ಯೋಜನೆ' ಪ್ರತಿದಿನ ಸರಾಸರಿ 50 ರಿಂದ 60 ಲಕ್ಷ ಮಹಿಳೆಯರಿಗೆ ಅನುಕೂಲವಾಗುತ್ತಿದೆ. 38.54 ಕೋಟಿ ಟ್ರಿಪ್‍ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಆದರೆ, ಶಕ್ತಿ ಯೋಜನೆಗೆ ಸರ್ಕಾರಕ್ಕೆ ಎದುರಾದ ದೊಡ್ಡ ಸವಾಲು ಅಂದಾಜು ಮೀರಿ ಆಗುತ್ತಿರುವ ವೆಚ್ಚ.
ಯೋಜನೆ ಜಾರಿಯಾದಾಗಿನಿಂದ ಈವರೆಗೆ ಸುಮಾರು 1,057.90 ಕೋಟಿ ರೂ. ಉಚಿತ ಟಿಕೆಟ್ ಪ್ರಯಾಣ ಮೌಲ್ಯದ ವೆಚ್ಚ ಆಗಿದೆ. ಇಷ್ಟು ದೊಡ್ಡ ಪ್ರಮಾಣದ ವೆಚ್ಚ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಯೋಜನೆಯಲ್ಲಿ ಸುಮಾರು 1% ದುರುಪಯೋಗ ಆಗುತ್ತಿದೆ ಎಂಬುದನ್ನು ಸಾರಿಗೆ ಸಚಿವರೇ ಒಪ್ಪಿಕೊಂಡಿದ್ದಾರೆ. ಈವರೆಗೆ ಶಕ್ತಿ ಯೋಜನೆಗೆ ಕೇವಲ 120 ಕೋಟಿ ರೂ. ಮೊದಲ ಕಂತನ್ನು ಬಿಡುಗಡೆ ಮಾಡಲಾಗಿದೆ. ಜಾರಿಯಾದ ಎರಡೂವರೆ ತಿಂಗಳಲ್ಲೇ ಶಕ್ತಿ ಯೋಜನೆ ವೆಚ್ಚ ಸಾವಿರ ಕೋಟಿ ದಾಟಿರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಸಿಬ್ಬಂದಿಗೆ ವೇತನ ವಿಳಂಬವಾಗದೆ. ಬಸ್ ನಿರ್ವಹಣೆಗೆ ಚ್ಯುತಿ ಬಾರದೇ ಯೋಜನೆ ನಿಭಾಯಿಸುವುದೇ ದೊಡ್ಡ ತಲೆನೋವಾಗಿದೆ.
- ಷರತ್ತಿನೊಂದಿಗೆ ಗೃಹ ಜ್ಯೋತಿ ಯೋಜನೆ ಜಾರಿ:ಕಾಂಗ್ರೆಸ್ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆ ಗೃಹ ಜ್ಯೋತಿ ಯೋಜನೆ. ಹಲವು ಗೊಂದಲ, ಷರತ್ತುಗಳ ಮಧ್ಯೆ ಗೃಹ ಜ್ಯೋತಿ ಯೋಜನೆಯನ್ನು ಜಾರಿ ಮಾಡಲಾಗಿದೆ. 200 ಯೂನಿಟ್‍ವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆ ಗೃಹಜ್ಯೋತಿ. ಈ ಯೋಜನೆ ಜು.1 ರಿಂದ ಜಾರಿಗೆ ಬಂದಿದ್ದು, ಆಗಸ್ಟ್ 1ರ ಬಿಲ್‍ನಿಂದ ಗ್ರಾಹಕರಿಗೆ ಸೌಲಭ್ಯ ದೊರೆಯುತ್ತಿದೆ. ಸುಮಾರು 2 ಕೋಟಿ ಗ್ರಾಹಕರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ. ಈವರೆಗೆ 1.49 ಕೋಟಿ ಗ್ರಾಹಕರು ನೋಂದಾಯಿಸಿಕೊಂಡಿದ್ದು, ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದಾರೆ. ಇದಕ್ಕಾಗಿ ವಾರ್ಷಿಕವಾಗಿ 13,910 ಕೋಟಿ ರೂ.ಗಳಷ್ಟು ವಿನಿಯೋಗವಾಗಲಿದೆ.
ಆದರೆ, ಹಿಂದಿನ ಒಂದು ವರ್ಷದ ಸರಾಸರಿ ಆಧಾರದಲ್ಲಿ ವಿದ್ಯುತ್ ಬಳಕೆ ಲೆಕ್ಕ ಹಾಕಲಾಗುತ್ತಿದ್ದು, ಇದರಿಂದ ಪ್ರಸಕ್ತ 200 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿದವರೂ ಬಿಲ್ ಪಾವತಿಸುತ್ತಿದ್ದಾರೆ. ಇದು ಪ್ರತಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಯಿತು. ಗೃಹ ಜ್ಯೋತಿಗೆ ಆರಂಭದಲ್ಲಿ ಹಲವು ಷರತ್ತುಗಳು, ಗೊಂದಲ, ಅರ್ಜಿ ನೋಂದಣಿ ಮಾಡಲು ಸಾಕಷ್ಟು ತಾಂತ್ರಿಕ ಸಮಸ್ಯೆ ಎದುರಾಯಿತು. ಸರ್ವರ್ ಡೌನ್, ಅರ್ಜಿ ಸಲ್ಲಿಕೆಗೆ ತಾಂತ್ರಿಕ ದೋಷಗಳು ಜನಾಕ್ರೋಶಕ್ಕೆ ಕಾರಣವಾಯಿತು. ಬಳಿಕ ಸಮಸ್ಯೆ ನಿವಾರಿಸಿ ಯೋಜನೆಗೆ ಚಾಲನೆ ನೀಡಲಾಯಿತು. ಈ ಯೋಜನೆಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಎಸ್ಕಾಂಗಳ ಮೇಲೆ ಭಾರಿ ಹೊರೆ ಬೀಳುತ್ತಿದ್ದು, ಅನುದಾನ ಪೂರೈಕೆ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.