ಬೆಂಗಳೂರು: ಸಿದ್ದರಾಮಯ್ಯರ ಬಜೆಟ್ ಮೂಗಿಗೆ ತುಪ್ಪ ಸವರುವ ರೀತಿಯಲ್ಲಿದೆ. ಬಿಜೆಪಿಯ 14 ಕಾರ್ಯಕ್ರಮಗಳನ್ನು ಕೈಬಿಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಲಿತೋದ್ಧಾರಕ ಎನ್ನುವ ಕಾಂಗ್ರೆಸ್ಸಿಗರು ಬಿಜೆಪಿ ಜಾರಿಗೊಳಿಸಿದ 14 ಕಾರ್ಯಕ್ರಮಗಳನ್ನು ಕೈಬಿಟ್ಟಿದ್ದಾರೆ. ನೂತನ ಶಿಕ್ಷಣ ನೀತಿ ರದ್ದು ಮಾಡಿದ್ದಾರೆ. ಪಠ್ಯ ಪರಿಷ್ಕರಿಸಿದ್ದಾರೆ. ರೈತರು ಮತ್ತಿತರರಿಗೆ ಜಾರಿ ಮಾಡಿದ್ದ ವಿದ್ಯಾನಿಧಿ ನಿಲ್ಲಿಸಿದ್ದಾರೆ. ಪ್ರತಿಯೊಂದು ಜಿಲ್ಲೆಗೆ ಗೋಶಾಲೆ ಕಟ್ಟುವ ಯೋಜನೆಯನ್ನು ಕೈಬಿಟ್ಟಿದ್ದಾರೆ. ರೈತಪರ ಎಪಿಎಂಸಿ ಕಾಯ್ದೆ ಬದಲಿಸಿದ್ದಾರೆ ಎಂದು ಟೀಕಿಸಿದರು.
ರೈತರಲ್ಲದವರು ಕೃಷಿ ಭೂಮಿ ಖರೀದಿಗೆ ಅವಕಾಶ ಕೊಟ್ಟಿದ್ದು, ಅದನ್ನು ಕೈಬಿಟ್ಟಿದ್ದಾರೆ. 'ನಮ್ಮ ಕ್ಲಿನಿಕ್' ಕೈಬಿಟ್ಟಿದ್ದಾರೆ. ಶಾಲೆಗಳಿಗೆ ಒಂದೇ ರೀತಿಯ ಬಣ್ಣವನ್ನು ಕೈಬಿಟ್ಟಿದ್ದಾರೆ. ಯುವಶಕ್ತಿ, ಸ್ತ್ರೀ ಸಾಮರ್ಥ್ಯ ಯೋಜನೆಗಳನ್ನು ಕೈಬಿಟ್ಟಿದ್ದಾರೆ. ರೈತ ಸಮ್ಮಾನ್ ಯೋಜನೆಯ ರಾಜ್ಯದ ಕೊಡುಗೆ 4 ಸಾವಿರ ರೂಪಾಯಿಯನ್ನು ಕೈಬಿಟ್ಟಿದ್ದಾರೆ. ಕೃಷಿಕ ಮಹಿಳೆಯರಿಗೆ ಮಾಸಿಕ 500 ರೂ. ಕೊಡುವ ಶ್ರಮಶಕ್ತಿಯನ್ನು ಕೈಬಿಟ್ಟಿದ್ದಾರೆ. ಅಗ್ನಿವೀರರಾಗಲು ಎಸ್ಸಿ, ಎಸ್‍ಟಿ ಯುವಕರಿಗೆ ತರಬೇತಿಯನ್ನು ರದ್ದು ಮಾಡಿದ್ದಾರೆ. ಅಂತರ್ಜಲ ಹೆಚ್ಚಿಸುವ ಜಲನಿಧಿ ಯೋಜನೆ, ಹಾಲು ಉತ್ಪಾದಕರ ಬ್ಯಾಂಕ್ ರದ್ದು, ವಿನಯ ಸಾಮರಸ್ಯ ಸ್ಕೀಂ ಕೈಬಿಟ್ಟಿದ್ದಾರೆ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯ 1995-2000, 2013ರಿಂದ 18ರ ವರೆಗೆ ಬಜೆಟ್ ಮಂಡಿಸಿದ್ದರು. ಅವನ್ನು ಅವಲೋಕನ ಮಾಡಿದಾಗ ಅವರು ಮಂಡಿಸಿದ ಬಜೆಟ್‍ಗಳ ಸ್ಥಿತಿಗತಿ ಅರ್ಥವಾಗುತ್ತದೆ. 2000 ವರೆಗಿನ 5 ವರ್ಷಗಳಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಮಿಗತೆಯಿಂದ ಆರ್ಥಿಕ ದುಃಸ್ಥಿತಿ ಕಡೆ ನಡೆಯಿತು. ನಂತರ ಎಸ್. ಎಂ. ಕೃಷ್ಣ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಅವರು ಹಣಕಾಸಿನ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿದ್ದರು. ಆಗ ರಾಜ್ಯದ ಆರ್ಥಿಕ ಸ್ಥಿತಿ ಶಿಥಿಲವಾದುದನ್ನು ತಿಳಿಸಿದ್ದರು. 2018ರಲ್ಲಿ ಅಧಿಕಾರದಿಂದ ಕೆಳಕ್ಕೆ ಇಳಿಯುವಾಗ ಸಾಲಕ್ಕೆ ರಾಜ್ಯವನ್ನು ಸಿಲುಕಿಸಿದ್ದನ್ನು ಅಂಕಿಅಂಶಗಳೇ ಹೇಳುತ್ತವೆ. ಅವರು 2.42 ಲಕ್ಷ ಕೋಟಿ ಸಾಲ ಮಾಡಿದ್ದರು ಎಂದು ನಾರಾಯಣಸ್ವಾಮಿ ಟೀಕಿಸಿದರು.
25 ಸಾವಿರ ಪೌರಕಾರ್ಮಿಕರನ್ನು ನಾವು ಖಾಯಂ ಮಾಡಿದ್ದೇವೆ. ಇನ್ನೂ 30 ಸಾವಿರ ಪೌರಕಾರ್ಮಿಕರಿದ್ದು, ಅವರ ಬಗ್ಗೆ ಸಿದ್ದರಾಮಯ್ಯರು ಚಕಾರ ಎತ್ತಿಲ್ಲ ಎಂದು ಆಕ್ಷೇಪಿಸಿದರು. 8 ಲಕ್ಷ ವಿದ್ಯಾರ್ಥಿನಿಯರಿಗೆ ನಾವು ಉಚಿತ ಬಸ್‍ಪಾಸ್ ಕೊಟ್ಟಿದ್ದೆವು. ಇವತ್ತು ಮಹಿಳೆಯರೆಲ್ಲರಿಗೆ ಉಚಿತ ಪ್ರಯಾಣ ಘೋಷಿಸಿದ್ದು, ವಿದ್ಯಾರ್ಥಿನಿಯರು ಯಾರೂ ಬಸ್ ಹತ್ತಲಾಗುತ್ತಿಲ್ಲ ಎಂದರು. ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವಾಗಿ ನೀವು ಮಾಡಲಿಲ್ಲ. ಹಕ್ಕುಪತ್ರ ನೀಡಿರಲಿಲ್ಲ. ಲಕ್ಷಗಟ್ಟಲೆ ಕುಟುಂಬಗಳಿಗೆ ನಾವು ಹಕ್ಕುಪತ್ರ ನೀಡಿದ್ದೇವೆ. ಆದರೆ, ಸಿದ್ದರಾಮಯ್ಯರು ಸುಳ್ಳುಗಳ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.