ಬೆಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಾಳೆಯಿಂದ ಎರಡು ದಿನ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.
ನಾಳೆಯಿಂದ ಎರಡು ದಿನ ಶಿರಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ಕಾಂಗ್ರೆಸ್ ಪಕ್ಷದ ಪಾಲಿಗೆ ಪ್ರತಿಷ್ಠೆಯಾಗಿರುವ ಶಿರಾ ವಿಧಾನಸಭೆ ಉಪ ಚುನಾವಣೆ ಗೆಲುವಿಗಾಗಿ ಎಲ್ಲಾ ನಾಯಕರು ಪರಿಶ್ರಮ ಪಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಣಕ್ಕಿಳಿದಿದ್ದು, ಅವರ ಪರವಾಗಿ ಎರಡು ದಿನ ಡಿಕೆಶಿ ಪ್ರಚಾರ ನಡೆಸಿದ್ದಾರೆ. ನಾಳೆಯಿಂದ ಎರಡು ದಿನ ಸಿದ್ದರಾಮಯ್ಯ ಪ್ರಚಾರ ಕಣದಲ್ಲಿದ್ದು, ಅಭ್ಯರ್ಥಿಯ ಪರ ವಿವಿಧೆಡೆ ಪ್ರಚಾರ ಸಭೆ ನಡೆಸಲಿದ್ದಾರೆ.
ನಾಳೆ ಬೆಳಗ್ಗೆ 10ರಿಂದ ಸಂಜೆ 4.30ರವರೆಗೆ ಶಿರಾ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸುವ ಸಿದ್ದರಾಮಯ್ಯ, ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಲಿದ್ದಾರೆ. ಕಾಡಜನ ಪಾಳ್ಯ ಗ್ರಾಮ, ಹುಣಸೆಹಳ್ಳಿ ಗ್ರಾಮ ಪಂಚಾಯಿತಿ, ಯರವರಹಳ್ಳಿ ಗ್ರಾಮ, ಹೊಸೂರು, ಬೇವಿನಹಳ್ಳಿ, ಚಂಗಾವರ, ದ್ವಾರನಕುಂಟೆ ಗ್ರಾಮ ಪಂಚಾಯಿತಿಗಳು, ವಾಜರಹಳ್ಳಿ ಗ್ರಾಮ, ನೇಜಂತಿ ಗ್ರಾಮ ಹಾಗೂ ಹುಲಿಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಅವರು ಪ್ರಚಾರ ಸಭೆ ನಡೆಸಲಿದ್ದಾರೆ.
ಶುಕ್ರವಾರ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿವಿಧೆಡೆ ಪ್ರಚಾರ ಸಭೆ ನಡೆಸಲಿದ್ದು, ಗೌಡಗೆರೆ, ಹೆಂದೊರೆ ಗ್ರಾಮ ಪಂಚಾಯಿತಿಗಳು, ವೀರಗಾನಹಳ್ಳಿ, ರಾಮಗೊಂಡನಹಳ್ಳಿ ಮತ್ತು ಪಟ್ಟನಾಯಕನಹಳ್ಳಿ, ಬರಗೂರು, ಮದಲೂರು, ಕೊಟ್ಟ ಗ್ರಾಮ ಪಂಚಾಯಿತಿಗಳು ಹಾಗೂ ಅಂತಿಮವಾಗಿ ಕಾಳಿದಾಸ ನಗರದ ರಂಗಮಂದಿರದಲ್ಲಿ ಪ್ರಚಾರ ಸಭೆ ಕೈಗೊಳ್ಳಲಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಟಿ.ಬಿ.ಜಯಚಂದ್ರ ಜೊತೆ ಹಲವು ಕಾಂಗ್ರೆಸ್ ನಾಯಕರು ಈಗಾಗಲೇ ಬಿರುಸಿನ ಪ್ರಚಾರ ಕಾರ್ಯ ನಡೆಸಿದ್ದಾರೆ. ಇದೀಗ ಡಿ.ಕೆ.ಶಿವಕುಮಾರ್ ಕೂಡ ಇಂದು ಎರಡನೇ ದಿನದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ನಾಳೆಯಿಂದ ಎರಡು ದಿನ ಸಿದ್ದರಾಮಯ್ಯ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದು, ಕಾರ್ಯಕರ್ತರಲ್ಲಿ ಇನ್ನಷ್ಟು ಹುರುಪು ತುಂಬಲಿದ್ದಾರೆ.