ಬೆಂಗಳೂರು: ರಾಜ್ಯದಲ್ಲಿ ಈಗ ಕೊರೊನಾ ಹೆಚ್ಚಾಗಿದ್ದು, ಲಾಕ್‌ಡೌನ್ ಅವಶ್ಯಕತೆಯಿದೆ. ಆದರೆ ಆಗ ಅಕಾಲಿಕವಾಗಿ ಲಾಕ್‌ಡೌನ್ ಮಾಡಿದರು. ಅದರಿಂದ ಆರೋಗ್ಯವೂ ಹೋಯಿತು, ಆರ್ಥಿಕತೆಯೂ ಹಾಳಾಯ್ತು. ಯಾವುದೇ ಸಿದ್ಧತಾ ಕ್ರಮ ತೆಗೆದುಕೊಳ್ಳದೇ ಲಾಕ್‌ಡೌನ್ ಮಾಡಿದ್ದರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಅವರು, ಹಾಗೆ ನೋಡಿದ್ರೆ ಲಾಕ್ ಡೌನ್ ಈಗ ಮಾಡಬೇಕಿತ್ತು. ಆಗ ಏಕಾಏಕಿ ಲಾಕ್ ಡೌನ್ ಮಾಡಿ ಆರ್ಥಿಕತೆ ಹಾಳು ಮಾಡಿದರು. ಈಗ ದಿನೇ ದಿನೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಆಗ ಲಾಕ್ ಡೌನ್ ಮಾಡುವ ಬದಲು ಈಗ ಮಾಡಬೇಕಿತ್ತು. ತಜ್ಞರು ಹೇಳುವ ಪ್ರಕಾರ ಆಗಸ್ಟ್ ವರೆಗೆ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಳವಾಗಲಿದೆ. ಹೀಗಾಗಿ ಈಗ ಲಾಕ್‌ಡೌನ್ ಮಾಡಬೇಕಾಗಿದೆ. ಆದರೆ ಈಗ ಲಾಕ್‌ಡೌನ್ ಮಾಡಿದರೆ ಆರ್ಥಿಕತೆ ಹಾಳಾಗುತ್ತೆ ಅಂತಾ ಸರ್ಕಾರ ಹೇಳ್ತಿದೆ ಎಂದರು.
ಬೆಂಗಳೂರು ಶಾಸಕರ ಬದಲಿಗೆ ಮೊದಲು ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು. ಅಲ್ಲಿ ಅವರ ತಪ್ಪು ಏನು ಎಂಬುದನ್ನು ಹೇಳುತ್ತೇವೆ. ಕೊರೊನಾ ತಡೆಯುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಹೀಗಾಗಿ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ಇಬ್ಬರು ಕೊರೊನಾ ಸೋಂಕು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.