ನವದೆಹಲಿ:ಕರ್ನಾಟಕದ 'ಮುಂದಿನ ಸಿಎಂ' ಪ್ರಹಸನ ಮುಗಿದಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಡಿಸಿಎಂ ಆಗಿ ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ. ಈ ಕುರಿತ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ ಮುನಿಸಿಕೊಂಡಿದ್ದ ಇಬ್ಬರು ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ದೆಹಲಿಯ ನಿವಾಸದಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.
ಇಂದು ಬೆಳಗ್ಗೆ ಉಭಯ ನಾಯಕರು ಖರ್ಗೆ ಅವರ ನಿವಾಸಕ್ಕೆ ತೆರಳಿ, ಮಾತುಕತೆಯಲ್ಲಿ ಭಾಗಿಯಾದರು. ಬಳಿಕ ಎಐಸಿಸಿ ಅಧ್ಯಕ್ಷರು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಕೈಗಳನ್ನು ಮೇಲಕ್ಕೆ ಎತ್ತುವ ಮೂಲಕ ನಮ್ಮಲ್ಲಿ ಯಾವುದೇ ಮುನಿಸು ಇಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದರು. ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಸಿಎಂ ಸ್ಥಾನಕ್ಕಾಗಿ ಪ್ರಬಲ ವಾದ ಮಂಡಿಸುತ್ತಾ ಹೈಕಮಾಂಡ್ಗೆ ಸವಾಲಾಗಿದ್ದ ನಾಯಕರ ಮೊಗದಲ್ಲಿ ಈಗ ಮಂದಹಾಸ ನಲಿದಾಡುತ್ತಿದೆ.
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಜೊತೆಗಿರುವ ಚಿತ್ರವನ್ನು ಖರ್ಗೆ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, "ಕರ್ನಾಟಕದ ಜನತೆಗೆ ಪ್ರಗತಿ, ಕಲ್ಯಾಣ ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಟೀಂ ಕಾಂಗ್ರೆಸ್ ಬದ್ಧವಾಗಿದೆ. 6.5 ಕೋಟಿ ಕನ್ನಡಿಗರಿಗೆ ನೀಡಿದ 5 ಭರವಸೆಗಳನ್ನು ನಾವು ಜಾರಿಗೊಳಿಸುತ್ತೇವೆ" ಎಂದು ಬರೆದುಕೊಂಡಿದ್ದಾರೆ.
ಮುನಿಸು ಮರೆತರಾ ಟಗರು- ಬಂಡೆ?:ಚುನಾವಣೆ ಘೋಷಣೆಯಾದ ಬಳಿಕ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಒಬ್ಬರನ್ನೊಬ್ಬರೂ ಈವರೆಗೂ ಭೇಟಿಯಾಗಿರಲಿಲ್ಲ. ಚುನಾವಣಾ ಪ್ರಚಾರದ ವೇಳೆ ಕುಚುಕು ಗೆಳೆಯರಂತಿದ್ದ ಇಬ್ಬರೂ, ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಸಿಕ್ಕ ಬಳಿಕ ದೂರವಾಗಿದ್ದರು. ಸಿಎಂ ಸ್ಥಾನಕ್ಕಾಗಿ ಪ್ರಬಲ ವಾದ ಮಂಡಿಸುತ್ತಾ ತಾವೇ ಪೂರ್ಣಾವಧಿಗೆ ಸಿಎಂ ಆಗಬೇಕು ಎಂದು ಹಟ ಹಿಡಿದಿದ್ದರು.
ಕಳೆದ 5 ದಿನಗಳಿಂದ ದೆಹಲಿಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ವೇಣುಗೋಪಾಲ್ ನೇತೃತ್ವದಲ್ಲಿ ಸರಣಿ ಸಭೆಗಳನ್ನು ನಡೆಸಲಾಗಿತ್ತು. ಇಷ್ಟಾದರೂ ರಾಜ್ಯದ ಪ್ರಭಾವಿ ನಾಯಕರು ಮಾತ್ರ ತಮ್ಮ ಪಟ್ಟು ಸಡಿಲ ಮಾಡಿರಲಿಲ್ಲ. ಕಡೆಗೂ ಡಿ.ಕೆ.ಶಿವಕುಮಾರ್ ಅವರ ಮನವೊಲಿಸುವಲ್ಲಿ ಹೈಕಮಾಂಡ್ ಯಶ ಕಂಡಿದೆ.