ಬೆಂಗಳೂರು:ಕೆಪಿಸಿಸಿ ಅಧ್ಯಕ್ಷಡಿ ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈಗ ರಾಜ್ಯ ಬಿಟ್ಟು ತಮ್ಮ ಕ್ಷೇತ್ರಗಳ ಕಡೆ ಗಮನ ಕೊಡುವಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿಗೆ ಭಯ ಕಾಡ್ತಿದೆ. ಕನಕಪುರ, ವರುಣಾದಲ್ಲಿ ನಮ್ಮ ಅಭ್ಯರ್ಥಿಗಳನ್ನು ನೋಡಿ ಭಯ ಆಗಿದೆ. ಕನಕಪುರ ಹಾಗೂ ವರುಣಾದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ನೋಡಿ ಅವರು ಕ್ಷೇತ್ರಕ್ಕೆ ಹೆಚ್ಚಿನ ಗಮನ ಕೊಡಬೇಕಾದ ಅನಿವಾರ್ಯತೆ ಬಂದಿದೆ. ರಾಜ್ಯ ಸುತ್ತುವುದು ಬಿಡಿ ತಮ್ಮ ಕ್ಷೇತ್ರದಲ್ಲೇ ಇರಬೇಕಾದ ಪರಿಸ್ಥಿತಿ ಬಂದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿದೆ ಬಿಜೆಪಿ ಪರ ಅಲೆ-ಕಟೀಲ್:ಕಾಂಗ್ರೆಸ್ ಬಹಳ ಕಷ್ಟದಿಂದ ಇವತ್ತು ತಮ್ಮ ಅಭ್ಯರ್ಥಿಗಳ ಘೋಷಣೆ ಮಾಡಿದ್ದು, ಗಜಪ್ರಸವ ಆಗಿದೆ. ಇನ್ನೂ ಹತ್ತಾರು ಕಡೆ ಕಾಂಗ್ರೆಸ್‌ನವರು ಕಾದು ಕೂತಿದ್ದಾರೆ. ನಮ್ಮದು ಕೇಡರ್ ಆಧಾರಿತ ಪಕ್ಷ. ಬಿಜೆಪಿಯಲ್ಲಿ ಮೂರು ವರ್ಷಕ್ಕೆ ಒಮ್ಮೆ ಆಂತರಿಕ ಚುನಾವಣೆ ನಡೆಯಲಿದೆ. ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹ ಮಾಡಿದ್ದೇವೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾರ್ಯಕರ್ತರ ಅಭಿಪ್ರಾಯಗಳನ್ನೂ ಪರಿಗಣಿಸಿದ್ದೇವೆ. ದೇಶದಲ್ಲಿ, ರಾಜ್ಯದಲ್ಲಿ ಮೋದಿ ಪರ ಅಲೆ ಇದೆ. ಮೋದಿ ನಾಯಕತ್ವವನ್ನು ಜನ ಒಪ್ಪಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಕಾರ್ಯಸಾಧನೆಗಳನ್ನು ಜನ ಒಪ್ಪಿದ್ದಾರೆ. ಜನ ನಮಗೆ ಆಶೀರ್ವಾದ ಮಾಡಲು ತಯಾರಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಎದ್ದಿದೆ ಎಂದು ನಳಿನ್ ಕುಮಾರ್ ಅಭಿಪ್ರಾಯಪಟ್ಟರು.
ಡಿ.ಕೆ. ಶಿವಕುಮಾರ್ಗೆ ಭಯ ಕಾಡ್ತಿದೆ- ನಳಿನ್ಕುಮಾರ್:ಕನಕಪುರದಲ್ಲಿ ಸಚಿವ ಆರ್. ಅಶೋಕ್ ಸ್ಪರ್ಧೆಗೆ ಡಿಕೆಶಿ ಲೇವಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ್ ಆ ರೀತಿ ಲೇವಡಿ ಮಾಡ್ತಿದ್ದಾರೆ. ಆದರೆ, ಅವರಿಗೆ ಹಿಂದೆ ತುಂಬಾ ಭಯ ಕಾಡುತ್ತಿದೆ. ಯಾವ ರೀತಿ ಭಯ ಅಂತಾ ಚುನಾವಣೆಯಲ್ಲಿ ಗೊತ್ತಾಗುತ್ತದೆ ನೋಡಿ. ಅಶೋಕ್ ಇವಾಗ ಪದ್ಮನಾಭ ನಗರದಲ್ಲಿ ರೆಡಿ ಮಾಡಿಕೊಳ್ತಿದ್ದಾರೆ. ಶೀಘ್ರವೇ ಅವ್ರು ಕನಕಪುರಕ್ಕೆ ಭೇಟಿ ಕೊಡ್ತಾರೆ. ನಾಮಪತ್ರ ಸಲ್ಲಿಕೆ ದಿನಾಂಕ ಯಾವಾಗ ಅಂತಾ ಶೀಘ್ರವೇ ದಿನಾಂಕ ನಿಗದಿ ಮಾಡ್ತೀವಿ ಎಂದರು.
ಕಾಂಗ್ರೆಸ್ನ ಜಗಳ ಬೀದಿಗೆ ಬರುತ್ತದೆ- ಕಟೀಲ್: ಕಾಂಗ್ರೆಸ್, ಜೆಡಿಎಸ್ ಪರಿಸ್ಥಿತಿ ಎಲ್ಲರೂ ನೋಡ್ತಿದಾರೆ. ಹಾಸನಕ್ಕೆ ಬಹಳ ದಿನಗಳ ನಂತರ ಅಭ್ಯರ್ಥಿ ಆಯ್ಕೆ ಆಗಿದೆ. ಪಾರ್ಟಿ ಕುಟುಂಬದ ಹಿಡಿತದಲ್ಲಿ ಇದ್ರೆ ಹೀಗೇ ಆಗುತ್ತೆ. ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳ ಕೊರತೆ ಕಾಡ್ತಿದೆ. ಇಂಥ ಹೀನಾಯ ಪರಿಸ್ಥಿತಿಗೆ ಕಾಂಗ್ರೆಸ್ ಹೋಗಿದೆ. ನಮ್ಮಲ್ಲಿ ಕೆಲವು ನಾಯಕರ ಮಕ್ಕಳಿಗೆ ಕುಟುಂಬದ ಆಧಾರದಲ್ಲಿ ಟಿಕೆಟ್ ಕೊಟ್ಟಿಲ್ಲ. ಕಾರ್ಯಕರ್ತರ ಆಧಾರದಲ್ಲಿ ಟಿಕೆಟ್ ಕೊಡಲಾಗಿದೆ. ಮುಂದೆ ಕಾಂಗ್ರೆಸ್ನ ಜಗಳ ಬೀದಿಗೆ ಬರುತ್ತದೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದರು.