ಬೆಂಗಳೂರು:ಅನೇಕಲ್ನಲ್ಲಿ ಅಂಗನವಾಡಿ ಮಕ್ಕಳ ಆಹಾರ ದುರ್ಬಳಕೆ ಪ್ರಕರಣ ಸಂಬಂಧ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಅವರ ಆಗ್ರಹಿಸಿದ್ದಾರೆ.
ರೇಸ್ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಆನೇಕಲ್ನಲ್ಲಿ ಕೇವಲ ಸ್ಯಾಂಪಲ್ ಅಷ್ಟೇ. ಇಡೀ ರಾಜ್ಯದಲ್ಲೇ ಇದು ನಡೆಯುತ್ತಿದೆ. ನಮ್ಮ ಶಾಸಕರು, ಸಂಸದರಿರುವ ಕಡೆಯೇ ಹೀಗೆ. ಇನ್ನು ಬಿಜೆಪಿ ಶಾಸಕರಿರುವ ಕಡೆ ಹೇಗೆ ನಡೆಯುತ್ತಿರಬಹುದು. ಯಡಿಯೂರಪ್ಪನವರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಆಹಾರ ಸ್ವಂತಕ್ಕೆ ಬಳಕೆ ಸರ್ಕಾರದಿಂದ ಅಂಗನವಾಡಿಗೆ ಕೊಟ್ಟ ಆಹಾರ ಪದಾರ್ಥವನ್ನು ಬಿಜೆಪಿಯ ಸ್ಥಳೀಯ ನಾಯಕರು ತಮ್ಮ ಸ್ವಂತ ಕೊಡುಗೆಯ ರೀತಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಕ್ಕರೆ ಸೇರಿ ಬೇರೆ ಆಹಾರ ಪದಾರ್ಥದ ಕವರ್ ಚೇಂಜ್ ಮಾಡಿ ಅವರ ಕವರ್ಗೆ ಹಾಕಿದ್ದಾರೆ. ಅದನ್ನ ಜನರಿಗೆ ನಾವು ಕೊಟ್ಟಿದ್ದು ಅಂತ ಹಂಚಿದ್ದಾರೆ. ಆನೇಕಲ್ ತಾಲೂಕಿನಾದ್ಯಂತ ಹಂಚಿದ್ದಾರೆ. ಹಿಂದೆಯೂ ಹೀಗೆ ಮಾಡಿದ್ದರು. ಆಗಲೂ ನಾವು ಬಯಲಿಗೆಳೆದಿದ್ದೆವು. ಮಕ್ಕಳು, ಬಾಣಂತಿಯರ ಆಹಾರ ಈ ರೀತಿ ಮಾಡಿದ್ರೆ ಹೇಗೆ? ಬಿಜೆಪಿಯವರಿಗೆ ಮಾನಮರ್ಯಾದೆ ಇದ್ಯಾ? ಇವರು ಇನ್ನೆಂತ ಬಂಡರಿರಬೇಕು. ಇದು ನಿರ್ಲಜ್ಜತನದ ಪರಮಾವಧಿ. ಇದನ್ನ ಖಂಡಿಸಿದರೆ ಸಾಲದು ಎಂದು ಬಿಜೆಪಿ ನಾಯಕರ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.