ಕರ್ನಾಟಕ

karnataka

ETV Bharat / state

ಕಾವೇರಿ ಕೊಡದಿದ್ರೆ ಕುಮಾರಪಾರ್ಕ್ ಈಸ್ಟ್ ನಿವಾಸ ನೀಡಿ.. ಸರ್ಕಾರಕ್ಕೆ ವಿಪಕ್ಷ ನಾಯಕ ಸಿದ್ದು ಪತ್ರ

ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿರುವ ಸಿದ್ದರಾಮಯ್ಯ,ಗಾಂಧಿ ಭವನದ ಹಿಂಭಾಗದಲ್ಲಿರುವ ಕುಮಾರಸ್ವಾಮಿ ಪಾರ್ಕ್ ಈಸ್ಟ್ ವ್ಯಾಪ್ತಿಯ ನಂಬರ್-1 ನಿವಾಸವನ್ನು ಹಂಚಿಕೆ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ.

ಸರ್ಕಾರಕ್ಕೆ ಸಿದ್ದರಾಮಯ್ಯ ಪತ್ರ

By

Published : Oct 22, 2019, 9:15 PM IST

ಬೆಂಗಳೂರು: ಕಾವೇರಿ ಬದಲು ನೀಡಿರುವ ರೇಸ್‌ ವ್ಯೂ ಕಾಟೇಜ್​ಗೆ ತೆರಳಲು ನಿರಾಕರಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪೀಕರ್​ಗೆ ಹಂಚಿಕೆಯಾಗಿರುವ ನಿವಾಸ ನೀಡುವಂತೆ ಹೊಸದಾಗಿ ಪತ್ರ ಬರೆದಿದ್ದಾರೆ.

ಕಾವೇರಿ ನಿವಾಸದಲ್ಲಿ ಎಷ್ಟು ದಿನ‌ ಇರುತ್ತಾರೋ ಇರಲಿ ಅವರು ಖಾಲಿ ಮಾಡಿದ‌ ನಂತರವೇ ಆ ನಿವಾಸಕ್ಕೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ ಬೆನ್ನಲ್ಲೇ ಸಿದ್ದು ಪತ್ರದ ಮೂಲಕ ಹೊಸ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂಧ ಸಿಎಂ ಯಡಿಯೂರಪ್ಪಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಗಾಂಧಿ ಭವನದ ಹಿಂಭಾಗದಲ್ಲಿರುವ ಕುಮಾರಸ್ವಾಮಿ ಪಾರ್ಕ್ ಈಸ್ಟ್‌ ವ್ಯಾಪ್ತಿಯ ನಂಬರ್-1 ನಿವಾಸವನ್ನು ಹಂಚಿಕೆ ಮಾಡುವಂತೆ ಬೇಡಿಕೆಯಿಟ್ಟಿದ್ದಾರೆ.

ಮೈತ್ರಿ ಸರ್ಕಾರದ ಅವಧಿಯಲ್ಲಿ ಹೆಚ್ ಡಿ ರೇವಣ್ಣಗೆ ಈ ನಿವಾಸ ಹಂಚಿಕೆಯಾಗಿತ್ತು. ಸದ್ಯ ರೇವಣ್ಣ ಅವರು ಆ ನಿವಾಸ ತೆರವುಗೊಳಿಸಿದ್ದಾರೆ. ಈ ನಡುವೆ ಮನೆ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಹಂಚಿಕೆಯಾಗಿದೆ. ಈಗ ಅದೇ ನಿವಾಸಕ್ಕೆ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ.

ಈ ಹಿಂದೆ ಕಾವೇರಿಯಲ್ಲೇ ಮುಂದುವರೆಯುವುದಾಗಿ ಸಿದ್ದರಾಮಯ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸರ್ಕಾರ ಸಿದ್ದರಾಮಯ್ಯ ಬೇಡಿಕೆಯನ್ನು ನಿರಾಕರಿಸಿ ರೇಸ್ ವ್ಯೂ ಕಾಟೇಜ್-2 ಮನೆಯನ್ನು ಹಂಚಿಕೆ ಮಾಡಿತ್ತು. ಆದರೆ, ಆ ನಿವಾಸ ಒಪ್ಪದ ಸಿದ್ದು, ಇದೀಗ ಮತ್ತೊಂದು ಪತ್ರ ಬರೆದು ಕುಮಾರಕೃಪಾ ಈಸ್ಟ್​ನ ನಿವಾಸಕ್ಕೆ ಹೊಸದಾಗಿ ಬೇಡಿಕೆ ಇಟ್ಟಿದ್ದಾರೆ.

ಈ ಹಿಂದೆ ಪ್ರತಿ ಪಕ್ಷದ ನಾಯಕನಾಗಿದ್ದಾಗ ಇದೆ ಮನೆಯಲ್ಲೇ ವಾಸ್ತವ್ಯ ಹೂಡಿದ್ದ ಸಿದ್ದರಾಮಯ್ಯ, ಇದೀಗ ಮತ್ತೆ ಪ್ರತಿ ಪಕ್ಷದ ನಾಯಕರಾದ ಮೇಲೆ ಕಾವೇರಿ ಇಲ್ಲದಿದ್ದರೆ ಕಡೇ ಪಕ್ಷ ತಮ್ಮ ಹಳೆಯ ಮನೆಗಾಗಿ ಪಟ್ಟು ಹಿಡಿದಿದ್ದಾರೆ. ಸದ್ಯ ಸಿದ್ದರಾಮಯ್ಯ ಕೇಳಿರುವ ಈ ನಿವಾಸ ಸ್ಪೀಕರ್ ವಿಶ್ವೇಶ್ವರ ಕಾಗೇರಿಗೆ ಹಂಚಿಕೆಯಾಗಿದ್ದು, ಅದೇ ನಿವಾಸವನ್ನು ಸಿದ್ದರಾಮಯ್ಯಗೆ ಮರು ಹಂಚಿಕೆ ಮಾಡುತ್ತಾರಾ ಅಥವಾ ಸಿದ್ದರಾಮಯ್ಯ ಬೇಡಿಕೆಯನ್ನು ತಳ್ಳಿ ಹಾಕುತ್ತಾರಾ ಕಾದು ನೋಡಬೇಕಿದೆ.

ABOUT THE AUTHOR

...view details