ಬೆಂಗಳೂರು: ಪಾದರಾಯನಪುರದಲ್ಲಿನ ಶಂಕಿತರನ್ನು ಕ್ವಾರಂಟೈನ್ ಮಾಡಲು ಯಾರೂ ಬೇಡ ಅಂದಿಲ್ಲ. ಬಿಜೆಪಿಯವರು ಅದನ್ನೇ ದೊಡ್ಡ ವಿವಾದ ಮಾಡುವ ಅಗತ್ಯತೆ ಇಲ್ಲವೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ರೋಗ ಜಾತಿ, ಧರ್ಮ ನೋಡ್ಕೊಂಡು ಬರೊಲ್ಲ, ಎಲ್ಲರ ರಕ್ಷಣೆ ಸರ್ಕಾರದ ಹೊಣೆ: ಸಿದ್ದರಾಮಯ್ಯ
ಆಶಾ ಕಾರ್ಯಕರ್ತೆಯರು, ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ಇದಕ್ಕೆ ಜಾತಿ, ಧರ್ಮದ ಬಣ್ಣ ಹಚ್ಚುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಆಹಾರ ಒದಗಿಸಲು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಮ್ಮ ಕ್ಷೇತ್ರದಲ್ಲಿ ಆರಂಭಿಸಿರುವ ಅನ್ನ ದಾಸೋಹ ಕೇಂದ್ರಕ್ಕೆ ಭೇಟಿ ನೀಡಿ, ವೀಕ್ಷಿಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ತಪ್ಪು ಮಾಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಅಲ್ಲದೆ, ರೋಗ ಜಾತಿ ಧರ್ಮ ನೋಡ್ಕೊಂಡು ಬರಲ್ಲ. ಸರ್ಕಾರ ಎಲ್ಲರನ್ನೂ ರಕ್ಷಣೆ ಮಾಡಬೇಕು ಎಂದರು.
ಇದೇ ವೇಳೆ ಮಾಜಿ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಯಾರು ಕ್ವಾರಂಟೈನ್ನಲ್ಲಿ ಇರಬೇಕು, ಬೇಡ ಅನ್ನೋದನ್ನು ವೈದ್ಯರು ಹೇಳಬೇಕು. ಸಚಿವ ಆರ್. ಅಶೋಕ್, ಅಥವಾ ಬಿಜೆಪಿ ಹೇಳಿದ ತಕ್ಷಣ ಕ್ವಾರಂಟೈನ್ ಆಗುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದರು. ಬಿಜೆಪಿ ಅವರು ಪ್ರತಿಯೊಂದರಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಒಬ್ಬರನ್ನು ಮತ್ತೊಬ್ಬರ ಮೇಲೆ ಎತ್ತಿಕಟ್ಟುವುದು ಹೆಚ್ಚು. ಈಶ್ವರಪ್ಪ, ಅನಂತ್ ಕುಮಾರ್ ಹೆಗಡೆ, ಸಿ ಟಿ ರವಿ, ಶೋಭಾ ಕರಂದ್ಲಾಜೆ ಅವರ ಬಾಯಿಗೆ ಬೀಗ ಹಾಕುವವರು ಯಾರೂ ಇಲ್ಲ. ಮಾಧ್ಯಮಗಳಲ್ಲಿ ತೋರಿಸುತ್ತಾರೆ ಎಂದು ಯಾವಾಗಲೂ ಮಾತಾಡುತ್ತಲೇ ಇರುತ್ತಾರೆ. ಲಾಕ್ಡೌನ್ ಆದ ಮೇಲೆ ಬೇರೆ ರಾಜ್ಯಗಳ ವಲಸೆ ಕಾರ್ಮಿಕರು ಇಲ್ಲಿ ಹೆಚ್ಚು ಉಳಿದಿದ್ದಾರೆ. ಅವರುಗಳಿಗೆ ರೇಶನ್ ಕಾರ್ಡ್ ಇಲ್ಲ. ಸರ್ಕಾರ ಎಲ್ಲರಿಗೂ ಆಹಾರ ಕೊಡುವುದಕ್ಕೆ ಆಗುತ್ತಿಲ್ಲ. ನಮ್ಮ ಕ್ಷೇತ್ರದಲ್ಲಿ ಹಲವಾರು ವಲಸೆ ಕಾರ್ಮಿಕರಿಗೆ ಆಹಾರ ನೀಡುತ್ತಿದ್ದೇವೆ ಎಂದರು.