ರಾಮನಗರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಸಿಗೆ ಕರೆ ತಂದು ಮುಖ್ಯಮಂತ್ರಿ ಮಾಡಿದ ಕೀರ್ತಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮರಸಪ್ಪ ರವಿ ಹೇಳಿದ್ದಾರೆ. ಜಿಲ್ಲೆಯ ಕನಕಪುರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಂಕಷ್ಟದ ಸುಳಿಗೆ ಸಿಲುಕಿದಾಗಲು ಅವರನ್ನ ತಮ್ಮ ತಂತ್ರಗಾರಿಕೆ ಮೂಲಕ ಬಚಾವ್ ಮಾಡಿದ್ದು ಡಿಕೆಶಿ. ಅವರ ಸಂಪುಟದಲ್ಲಿ ಅತ್ಯುತ್ತಮ ಸಚಿವನಾಗಿ ಸರ್ಕಾರಕ್ಕೆ ಕೀರ್ತಿ ತಂದುಕೊಟ್ಟಿದ್ದು ಶಿವಕುಮಾರ್. ಇವರು ಮುಖ್ಯಮಂತ್ರಿಯಾಗಲು ಅಡ್ಡಿ ಆಗುವ ಮನಸ್ಸು ಮಾಡಬೇಡಿ ಎಂದು ಸಿದ್ದರಾಮಯ್ಯ ಅವರಲ್ಲಿ ಮರಸಪ್ಪ ಮನವಿ ಮಾಡಿದ್ದಾರೆ.
ಜನತಾ ದಳದಲ್ಲಿ ಮೂಲೆಗುಂಪಾಗುತ್ತಿದ್ದ ನಿಮ್ಮನ್ನ ಗುರುತಿಸಿ ತಮಗೆ ಸ್ಥಾನಮಾನ ಕೊಡಿಸಿದ ಹಿನ್ನೆಲೆ ಡಿಕೆಶಿಗೆ ಇದೆ. ಇಂತಹ ವ್ಯಕ್ತಿತ್ವದ ಮನುಷ್ಯನ ಉಜ್ವಲ ಆಕಾಂಕ್ಷೆಯನ್ನು ಈಡೇರಿಕೆ ಮಾಡುವುದು ತಮ್ಮ ಗುಣ ಕೂಡ ಹೌದೆಂದು ಭಾವಿಸಿದ್ದೇನೆ. ಸಕಾರಾತ್ಮಕವಾಗಿ ಇದಕ್ಕೆ ಸ್ಪಂದಿಸುವಂತೆ ನಾನು ಕೋರುತ್ತೇನೆ ಎಂದು ಮರಸಪ್ಪ ರವಿ ಅವರು ಸಿದ್ದರಾಮಯ್ಯಗೆ ಬೇಡಿಕೊಂಡಿದ್ದಾರೆ.
ಡಿಕೆಶಿ ಅವರು ಮುಖ್ಯಮಂತ್ರಿಯಾಗಲು ಸಹಕರಿಸಿ: ಪಕ್ಷ ಸಂಕಷ್ಟದಲ್ಲಿ ಸಿಲುಕಿದ್ದಾಗ ತಮ್ಮ ವೈಯಕ್ತಿಕ ಬದುಕನ್ನು ಲೆಕ್ಕಿಸದೆ ಪಕ್ಷವನ್ನ ಸದೃಢಗೊಳಿಸಿದ ಶಕ್ತಿ ಶಿವಕುಮಾರ್ ಅವರದ್ದು. ಅವರ ಆಸೆಯನ್ನು ತಾವು ಮಂಕಾಗಿಸಬೇಡಿ. ಅವರ ಸಾಮರ್ಥ್ಯವನ್ನು ತಾವು ಮನದಲ್ಲಿಡಿ. ತಮಗೆ ಸಹಾಯ ಮಾಡಿ, ಸಹಕಾರಿಯಾದ ಡಿಕೆಶಿ ಅವರನ್ನು ಮುಖ್ಯಮಂತ್ರಿಯಾಗಲು ಸಹಕರಿಸಿ ಎಂದು ಅವರು ಹೇಳಿದ್ದಾರೆ.
ಸಭೆ ಕರೆದ ಒಕ್ಕಲಿಗ ಮಠಾಧೀಶರು:ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೇಂದ್ರೀಕೃತವಾಗಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ.