ಬೆಂಗಳೂರು:ಉಡುಪಿಯ ಕುಂದಾಪುರದ ಕೋಟತಟ್ಟುವಿನಲ್ಲಿ ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿರುವ ಕೊರಗ ಸಮುದಾಯದ ಮೇಲೆ ಪೊಲೀಸರೇ ಪ್ರಕರಣ ದಾಖಲು ಮಾಡಿರುವುದು ನೋಡಿದರೆ ದೌರ್ಜನ್ಯ ಆಕಸ್ಮಿಕ ಅಲ್ಲ, ಯೋಜಿತ ಸಂಚಿನಂತೆ ಕಾಣುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕೊರಗ ಸಮುದಾಯದ ಮೇಲೆ ಕೋಟ ಪೊಲೀಸರು ಪ್ರಕರಣ ದಾಖಲಿಸಿರುವುದು, ಅಮಾನವೀಯವಾದುದು ಮಾತ್ರವಲ್ಲ, ಅತ್ಯಂತ ನಾಚಿಕೆಗೇಡಿನ ಸಂಗತಿ. ಈ ಪ್ರಕರಣವನ್ನು ತಕ್ಷಣ ವಾಪಸು ಪಡೆಯಲು ಸಿಎಂ ಸೂಚನೆ ನೀಡಿ, ಕಾರಣಕರ್ತ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೂಗಳೆಲ್ಲ ಒಂದು ಎಂದು ಉದ್ಘೋಷಿಸುತ್ತಿರುವ ಬಿಜೆಪಿ ಬ್ರಾಂಡಿನ ಹಿಂದೂ ಧರ್ಮದಲ್ಲಿ ಕೊರಗ ಸಮುದಾಯ ಸೇರಿಲ್ಲವೇ?. ದಲಿತರನ್ನು ಅಸ್ಪೃಶ್ಯರನ್ನಾಗಿಯೇ ಉಳಿಸುವುದು ಇವರ ಗುಪ್ತ ಅಜೆಂಡಾವೇ?. ದೌರ್ಜನ್ಯಕ್ಕೀಡಾದ ಕೊರಗರ ಪರ ಕಂಬನಿ ಮಿಡಿದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ಬಾರದೆ ಪೊಲೀಸರು ಕೊರಗ ಬಂಧುಗಳ ವಿರುದ್ದ ಪ್ರಕರಣ ದಾಖಲಿಸಿದ್ದಾರೆಯೇ?. ಹಾಗೆ ನಡೆದಿದ್ದರೆ ಅವರೊಬ್ಬ ಅಸಮರ್ಥ ಸಚಿವ, ಗಮನಕ್ಕೆ ಬಂದು ನಡೆದಿದ್ದರೆ ಅದು ಆತ್ಮವಂಚಕ ನಡವಳಿಕೆ ಎಂದು ಕಿಡಿಕಾರಿದ್ದಾರೆ.