ಬೆಂಗಳೂರು: ಶಿಕ್ಷಕರ ನೇಮಕಾತಿ ಹಗರಣ ನಮ್ಮ ಅವಧಿಯಲ್ಲಿ ನಡೆದಿದೆ ಎಂದು ತಪ್ಪು ಮಾಹಿತಿ ನೀಡುವ ಕಾರ್ಯ ಆಗುತ್ತಿದೆ. ಈಗಾಗಾಲೇ ಈ ಬಗ್ಗೆ ಸ್ಪಷ್ಟತೆ ನೀಡಿದ್ದರೂ ಕಾಂಗ್ರೆಸ್ ಸರ್ಕಾರದ ಅವಧಿಯ ಶಿಕ್ಷಕರ ನೇಮಕ ಹಗರಣ ಎಂದು ಸುಳ್ಳು ಬರೆಯಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ಶಿಕ್ಷಕರ ನೇಮಕಾತಿ ಹಗರಣ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಸಪ್ಟೆಂಬರ್ 23 ರಂದು ಮಾಧ್ಯಮಗೋಷ್ಠಿ ನಡೆಸಿ ಯಾವ್ಯಾವ ಕಾಲದಲ್ಲಿ ನೇಮಕಗೊಂಡಿದ್ದಾರೆ ಎಂಬ ಹೆಸರು, ಅಕ್ರಮವಾಗಿ ಆದೇಶ ಪಡೆದ ದಿನಾಂಕ ಇತ್ಯಾದಿ ವಿವರಗಳನ್ನು ದಾಖಲೆ ಸಮೇತ ವಿವರಿಸಿದರೂ ಸಹ ಕೆಲವು ಮಾಧ್ಯಮಗಳು ಮತ್ತೆ ಮತ್ತೆ ಕಾಂಗ್ರೆಸ್ ಸರ್ಕಾರದ ಕಾಲದ, ಸಿದ್ದರಾಮಯ್ಯ ಅವಧಿಯ ನೇಮಕಾತಿ ಹಗರಣ ಎಂದೆಲ್ಲ ಬರೆಯುತ್ತಿದ್ದಾರೆ.
ನನಗೆ ಲಭಿಸಿರುವ ದಾಖಲೆಗಳಂತೆ ಈ ಶಿಕ್ಷಕರುಗಳು ಯಾವ್ಯಾವ ಅವಧಿಯಲ್ಲಿ ನೇಮಕಗೊಂಡಿದ್ದಾರೆ ಎಂಬ ಮಾಹಿತಿಯನ್ನು ಮಾಧ್ಯಮಗಳಿಗೆ ಮತ್ತೊಮ್ಮೆ ತಿಳಿಸ ಬಯಸುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ನೇಮಕ ಆಗಿಲ್ಲ : ದಸ್ತಗಿರಿಯಾಗಿರುವ 12 ಜನ ಶಿಕ್ಷಕರಲ್ಲಿ 7 ಜನರು 2019ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಸುರೇಶ್ ಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿದ್ದಾಗ ನೇಮಕಗೊಂಡಿದ್ದಾರೆ.
ಉಳಿದ 5 ಜನರಲ್ಲಿ ಇಬ್ಬರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನೇಮಕಗೊಂಡಿದ್ದಾರೆ. ಉಳಿದವರಲ್ಲಿ ಒಬ್ಬನಿಗೆ 2018 ರಲ್ಲಿ ಒಬ್ಬ 2015 ರಲ್ಲಿ, ಮತ್ತೊಬ್ಬ 2017 ರಲ್ಲಿ, ಇನ್ನೊಬ್ಬ 2018 ರಲ್ಲಿ ನೇಮಕಾತಿ ಆದೇಶ ಪಡೆದಿದ್ದಾನೆಂದು ದಾಖಲೆಗಳು ಹೇಳುತ್ತವೆ. 2012-13 ರಲ್ಲಿ ಕರೆದಿದ್ದ ಶಿಕ್ಷಕರ ಹುದ್ದೆಗಳ ಬ್ಯಾಚಿನಲ್ಲೂ ಒಬ್ಬಾತ ಸೇರಿಕೊಂಡಿದ್ದಾನೆಂಬ ಮಾಹಿತಿ ಇದೆ. ಅದರ ನಂತರ 2015 ರಲ್ಲಿ ಮತ್ತೊಮ್ಮೆ ಹುದ್ದೆಗಳನ್ನು ತುಂಬಿಕೊಳ್ಳಲು ಪ್ರಕ್ರಿಯೆ ನಡೆದಿತ್ತು ಎಂದು ವಿವರಿಸಿದ್ದಾರೆ.
ನೇಮಕಾತಿ ಪ್ರಕ್ರಿಯೆ ಬಗ್ಗೆ ಶಾಸಕರಿಂದ ವಿವರಣೆ : ಈ ಅವಧಿಗಳಲ್ಲಿ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರು ಮತ್ತು ಕಿಮ್ಮನೆ ರತ್ನಾಕರ ಅವರು ಶಿಕ್ಷಣ ಸಚಿವರುಗಳಾಗಿ ಕೆಲಸ ಮಾಡಿದ್ದರು. ಈಗಾಗಲೆ ಶಿಕ್ಷಣ ಸಚಿವರು ಮಾಧ್ಯಮಗಳಿಗೆ ನೇಮಕಾತಿ ಪ್ರಕ್ರಿಯೆ ಹೇಗೆ ನಡೆಯುತ್ತದೆಂದು ವಿವರಿಸಿದ್ದಾರೆ.