ಕರ್ನಾಟಕ

karnataka

ETV Bharat / state

ಸೋನಿಯಾ ಗಾಂಧಿ ಭೇಟಿ ಸಂದರ್ಭ ರಾಷ್ಟ್ರ ರಾಜಕಾರಣದ ವಿಚಾರ ಚರ್ಚೆಗೆ ಬಂದಿಲ್ಲ: ಸಿದ್ದರಾಮಯ್ಯ - ಸೋನಿಯಾ ಗಾಂಧಿ ಭೇಟಿ ಕುರಿತು ಸಿದ್ದರಾಮಯ್ಯ ಮಾತು

ರಾಷ್ಟ್ರ ರಾಜಕಾರಣಕ್ಕೆ ‌ಬರುವಂತೆ ನನಗೆ ಆಹ್ವಾನವನ್ನೇ ನೀಡಿಲ್ಲ, ಸೋನಿಯಾ ಗಾಂಧಿ ಭೇಟಿ ಸಂದರ್ಭ ರಾಷ್ಟ್ರ ರಾಜಕಾರಣದ ವಿಚಾರ ಚರ್ಚೆಗೆ ಬಂದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

siddaramaiah clarification about sonia gandhi meet
ಸಿದ್ದರಾಮಯ್ಯ ಸುದ್ದಿಗೋಷ್ಟಿ

By

Published : Oct 11, 2021, 5:35 PM IST

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಇತ್ತೀಚೆಗೆ ಭೇಟಿಯಾದಾಗ ರಾಷ್ಟ್ರ ರಾಜಕಾರಣದ ವಿಷಯ ಚರ್ಚೆಗೇ ಬಂದಿಲ್ಲ. ಆದರೂ ಕೆಲ ಮಾಧ್ಯಮಗಳಲ್ಲಿ ಕಲ್ಪಿತ ವರದಿಗಳು ಪ್ರಸಾರವಾಗುತ್ತಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಮಾಧ್ಯಮಗೋಷ್ಟಿ

ನಗರದ ಖಾಸಗಿ ಸಮಾರಂಭವೊಂದರಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣಕ್ಕೆ ‌ಬರುವಂತೆ ನನಗೆ ಆಹ್ವಾನವನ್ನೇ ನೀಡಿಲ್ಲ.‌ ಆ ವಿಷಯದ ಬಗ್ಗೆ ಸೋನಿಯಾ ಗಾಂಧಿ ಅವರು ಪ್ರಸ್ತಾಪವನ್ನೇ ಮಾಡಲಿಲ್ಲ. ಆದರೂ ಅವರಿಗೆ ಈ ವಿಷಯದ ಬಗ್ಗೆ ಬೇಜಾರಾಗಿದೆ ಎಂದರೆ ಯಾವ ರೀತಿ ಸ್ಪಷ್ಟನೆ ಕೊಡಬೇಕು? ಚರ್ಚೆಯಾಗಿದ್ದರೆ ತಾನೇ ಮನಸ್ತಾಪ ಮೂಡೋದು? ಇಷ್ಟು ಸ್ಪಷ್ಟವಾಗಿ ಹೇಳಿದ್ದರೂ ಪತ್ರಿಕೆಗಳಲ್ಲಿ ಈ ವಿಚಾರದ ಬಗ್ಗೆ ಕಲ್ಪಿತ ವರದಿಗಳು ಬರುತ್ತಿವೆ ಎಂದರೆ ಪತ್ರಿಕೆಗಳು ಪತ್ರಿಕಾ ಧರ್ಮವನ್ನು ಮರೆತಿವೆ ಎಂಬುದಾಗಿ ಹೇಳಬೇಕಾಗುತ್ತದೆ‌ ಎಂದರು.

ಕಲ್ಲಿದ್ದಲು ಕೊರತೆ ಕೃತಕವೋ ಅಥವಾ ಸ್ವಾಭಾವಿಕವೋ ಎಂಬ ಬಗ್ಗೆ ಮೊದಲು ಗೊತ್ತಾಗಬೇಕು, ಕರ್ನಾಟಕದಲ್ಲಿ ಈವರೆಗೆ ವಿದ್ಯುತ್ ಅಭಾವ ಇರಲಿಲ್ಲ, ಯಾವಾಗಲೂ ವಿದ್ಯುತ್ ಉತ್ಪಾದನೆ ಅಗತ್ಯ ಪ್ರಮಾಣಕ್ಕಿಂತ ಹೆಚ್ಚಿತ್ತು. ನಮ್ಮಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಸ್ಥಗಿತವಾಗಿರುವುದರಿಂದ ನಮ್ಮ ರಾಜ್ಯಕ್ಕೆ ಕಲ್ಲಿದ್ದಲಿನ ಅಗತ್ಯ ಹೆಚ್ಚಿಲ್ಲ. ಸರ್ಕಾರ ವಿದ್ಯುತ್ ಉತ್ಪಾದಕಾ ಘಟಕಗಳನ್ನು ಖಾಸಗಿಯವರಿಗೆ ನೀಡುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿ ಮಾಡಬಾರದು. ಹಾಗೇನಾದರೂ ಸರ್ಕಾರ ಮಾಡಿದರೆ ನಾನು ಅದನ್ನು ಖಂಡಿಸುತ್ತೇನೆ. ವಿದ್ಯುತ್ ಘಟಕಗಳನ್ನು ಖಾಸಗೀಕರಣ ಮಾಡಬಾರದು, ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಒಮ್ಮೆ ಖಾಸಗೀಕರಣಗೊಂಡರೆ ರೈತರಿಗೆ ಪೂರೈಕೆಯಾಗುತ್ತಿರುವ ಉಚಿತ ವಿದ್ಯುತ್ ಅನ್ನು ನಿಲ್ಲಿಸುತ್ತಾರೆ ಎಂದರು.

ದೇಶಭಕ್ತರ ಸರ್ಕಾರ ಬೆಂಗಳೂರು ನಗರ ಉಸ್ತುವಾರಿ ಸ್ಥಾನಕ್ಕಾಗಿ ಕಿತ್ತಾಟ ಮಾಡುತ್ತಿದೆ. ಇದು ಲಾಭದಾಯಕ ಸ್ಥಾನವಾಗಿರುವುದರಿಂದ ಇಷ್ಟೆಲ್ಲಾ ಗಲಾಟೆಗಳಾಗುತ್ತಿವೆ. ಜಿಎಸ್​​​ಟಿ ಪರಿಹಾರ, ನಮ್ಮ ತೆರಿಗೆ ಪಾಲಿನ ಹಣವನ್ನು ರಾಜ್ಯ ಸರ್ಕಾರ ಗಟ್ಟಿಧ್ವನಿಯಲ್ಲಿ ಕೇಳಬೇಕು. ಇದೇನು ಭಿಕ್ಷೆಯಲ್ಲ, ನಮ್ಮ ಹಕ್ಕು. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಆಗುತ್ತಿದೆ. ಏಪ್ರಿಲ್ ನಿಂದ ಸೆಪ್ಟೆಂಬರ್​​ವರೆಗೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 3,000 ಕೋಟಿ ರೂಪಾಯಿ ತೆರಿಗೆ ಹೆಚ್ಚು ಸಂಗ್ರಹವಾಗಿದೆ. ಸ್ಟಾಲಿನ್ ಸರ್ಕಾರ ಮೂರು ರೂಪಾಯಿ ತೆರಿಗೆ ಕಡಿಮೆ ಮಾಡಿದೆ, ನಮ್ಮ ರಾಜ್ಯದಲ್ಲಿ ಕನಿಷ್ಟ ಹತ್ತು ರೂಪಾಯಿ ಕಡಿಮೆ ಮಾಡಬೇಕು. ಆಗ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗುತ್ತದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಬೇಕು. ಕಳೆದ ಏಳು ವರ್ಷದಲ್ಲಿ ಪೆಟ್ರೋಲ್ ಡೀಸೆಲ್ ಮೇಲಿನ ಅಬಕಾರಿ ಸುಂಕ ಒಂದರಿಂದಲೇ ಕೇಂದ್ರ ಸರ್ಕಾರಕ್ಕೆ 23 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ವಿವರಿಸಿದರು.

ಕರ್ನಾಟಕವೊಂದರಿಂದಲೇ 1.20 ಲಕ್ಷ ಕೋಟಿ ರೂಪಾಯಿ ಸಂಗ್ರಹವಾಗಿದೆ. ಬಡವರ ಬಗ್ಗೆ ದೊಡ್ಡ- ದೊಡ್ಡ ಮಾತನಾಡುವ ಬಿಜೆಪಿಯವರು ತೆರಿಗೆ ಕಡಿತ ಮಾಡಿ ಜನರಿಗೆ ಸಹಾಯ ಮಾಡಲಿ. ಕೋವಿಡ್​​ಗೂ ಪೆಟ್ರೋಲ್ ಬೆಲೆ ಏರಿಕೆಗೂ ಸಂಬಂಧ ಏನು? ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ ಎಂಬ ಕಾರಣಕ್ಕೆ ಬಡ ಜನರ ರಕ್ತ ಕುಡಿಯುವುದು ಸರಿನಾ? ಕಾರ್ಪೊರೇಟ್ ಸಂಸ್ಥೆಗಳ ಮೇಲೆ ತೆರಿಗೆ ಹೆಚ್ಚು ಮಾಡಲಿ. ಕೊರೊನಾ ಇದ್ದರೂ ಅದಾನಿ ಆಸ್ತಿ ನಾಲ್ಕು ಪಟ್ಟು ಹೆಚ್ಚಾಗಿದೆ, ಬಡವರ ಬದುಕು ಬೀದಿಗೆ ಬರುತ್ತಿದೆ. ಹೀಗಿದ್ದಾಗ ಯಾರ ಮೇಲೆ ತೆರಿಗೆ ಹೆಚ್ಚು ಮಾಡಬೇಕು ಅಂತ ಸರ್ಕಾರಕ್ಕೆ ಗೊತ್ತಾಗಲ್ವಾ? ಅದಾನಿ, ಅಂಬಾನಿ ಬೆಳೆಯಬೇಕು, ಬಡವರು ಸಾಯಬೇಕು, ಇದು ಬಿಜೆಪಿ ಅವರ ನೀತಿ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಅವರ ಮೇಲೆ ನನಗೆ ಪ್ರೀತಿಯಾಗಲಿ, ದ್ವೇಷವಾಗಲಿ ಇಲ್ಲ. ಬಿಜೆಪಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದರೆ ಸುಧಾಕರ್ ಪಕ್ಷಕ್ಕೆ ರಾಜೀನಾಮೆ ನೀಡಲಿ. ರಾಹುಲ್ ಗಾಂಧಿಯವರೇ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಬೇಕು ಎಂಬುದನ್ನು ಬಹುಕಾಲದಿಂದ ಹೇಳುತ್ತಾ ಬಂದಿದ್ದೇನೆ. ಈಗಲೂ ಆದಷ್ಟು ಬೇಗ ಅವರೇ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಬೇಕು ಎಂದು ಕೋರುತ್ತೇನೆ ಎಂದು ಹೇಳಿದರು.

ABOUT THE AUTHOR

...view details