ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಪ್ರಧಾನಿ ನರೇಂದ್ರ ಮೋದಿಯವರ ಎದುರು ಧೈರ್ಯದಿಂದ ಮಾತನಾಡಿ ರಾಜ್ಯಕ್ಕೆ ನ್ಯಾಯ ಕೊಡಿಸಲಿ. ಆಗ ನಾನು ‘ನಾಯಿ ಮರಿ’ ಎಂದು ಹೇಳಿರುವುದನ್ನು ವಾಪಸ್ ಪಡೆಯುತ್ತೇನೆ. ಅಷ್ಟೇ ಅಲ್ಲ, ಅವರಿಗೆ ‘ರಾಜಾ ಹುಲಿ’ ಎನ್ನುವ ಬಿರುದು ಕೊಡುತ್ತೇನೆ ಅಂತಾ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕಾರ್ಪೊರೇಟ್ ತೆರಿಗೆ, ಸುಂಕ, ಪೆಟ್ರೋಲ್-ಡೀಸೆಲ್ ತೆರಿಗೆ, ಜಿಎಸ್‌ಟಿ ಮೂಲಕ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಸಂದಾಯವಾಗುತ್ತಿರುವ ಹಣ ಸುಮಾರು ರೂ.3.50 ಲಕ್ಷ ಕೋಟಿ, ರಾಜ್ಯಕ್ಕೆ ವಾಪಸ್ ಬರುವುದು 50,000 ಕೋಟಿಗಿಂತಲೂ ಕಡಿಮೆ. ಈ ಅನ್ಯಾಯದ ವಿರುದ್ಧ ದನಿ ಎತ್ತುವ ಧಮ್ ಇದೆಯೇ?. ಮನಮೋಹನ್ ಸಿಂಗ್ ಸರ್ಕಾರ 2019ರಲ್ಲಿ ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ನೀಡಿರುವ ಪಾಲು 39,000 ಕೋಟಿ ರೂ., ಕಳೆದ ವರ್ಷ ರಾಜ್ಯಕ್ಕೆ ಬಂದಿರುವ ಹಣ ರೂ.29,000 ಕೋಟಿ ರೂ., ಬಜೆಟ್ ಗಾತ್ರ ಹೆಚ್ಚಿದೆ, ತೆರಿಗೆ ಸಂಗ್ರಹ ಹೆಚ್ಚಿದೆ, ರಾಜ್ಯದ ಪಾಲು ಕಡಿಮೆಯಾಗಿದೆ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಕೇಂದ್ರ ಪ್ರಾಯೋಜಿತ ಯೋಜನೆಗಳು ಮತ್ತು ಜಿಎಸ್‌ಟಿ ಪರಿಹಾರದಿಂದ ಬಂದಿರುವ ಹಣ 30,000 ಕೋಟಿ ರೂ., ಈ ವರ್ಷ ಕೇಂದ್ರ ನೀಡಿರುವುದು 20,106 ಕೋಟಿ ರೂ., ವರ್ಷದಿಂದ ವರ್ಷಕ್ಕೆ ರಾಜ್ಯದ ಪಾಲು ಕಡಿಮೆಯಾಗುತ್ತಿರುವುದು ಯಾಕೆ ಮುಖ್ಯಮಂತ್ರಿಗಳೇ?. 2017ರಿಂದ ಮೇಕೆದಾಟು, 2020 ರಿಂದ ಮಹದಾಯಿ ಮತ್ತು 2021ರಿಂದ ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡದೆ ಸತಾಯಿಸುತ್ತಿದೆ. ಮಹದಾಯಿ ಬಗ್ಗೆ ಇತ್ತೀಚೆಗೆ ಅನುಮತಿ ನೀಡಲಾಗಿದೆ ಎಂದು ಹೇಳುತ್ತಿದ್ದರೂ ಕಾರ್ಯರೂಪಕ್ಕೆ ಬಂದಿಲ್ಲ. ಇದರ ವಿರುದ್ಧ ಧ್ವನಿ ಎತ್ತುವವರು ಯಾರು? ಎಂದು ಕೇಳಿದ್ದಾರೆ.