ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​ನ ಇಬ್ಬರು ಶಾಸಕಿಯರು ರಾಜೀನಾಮೆ ಸಾಧ್ಯತೆ: ನಾಳೆ ಸಿಎಲ್​ಪಿ ಸಭೆ ಕರೆದ ಸಿದ್ದರಾಮಯ್ಯ - CLP MEETING TOMORROW

ನಾಳೆ ಬೆಳಗ್ಗೆ 9ಕ್ಕೆ ಯಶವಂತಪುರ ತಾಜ್ ವಿವಾಂತಾ ಹೋಟೆಲ್​​ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಸಿದ್ದರಾಮಯ್ಯ, ಅಲ್ಲಿ ಇನ್ನಷ್ಟು ಕೈ ಶಾಸಕರು ಪಕ್ಷ ಬಿಡದಂತೆ ಮನವೊಲಿಸುವ ಯತ್ನ ಮಾಡಲಿದ್ದಾರೆ.

ನಾಳೆ ಸಿಎಲ್​ಪಿ ಸಭೆ ಕರೆದ ಸಿದ್ದರಾಮಯ್ಯ

By

Published : Jul 14, 2019, 1:45 PM IST


ಬೆಂಗಳೂರು: ಎಂಟಿಬಿ ನಾಗರಾಜ್ ಮತ್ತೆ ಅತೃಪ್ತರ ಪಾಳಯ ಸೇರಿಕೊಂಡಿದ್ದು, ಸರ್ಕಾರಕ್ಕೆ ಆತಂಕ, ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿರುವ ಸಂದರ್ಭದಲ್ಲೇ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಿಎಲ್​ಪಿ ಸಭೆ ಕರೆದಿದ್ದಾರೆ.

ನಾಳೆ ಬೆಳಗ್ಗೆ 9ಕ್ಕೆ ಯಶವಂತಪುರ ತಾಜ್ ವಿವಾಂತಾ ಹೋಟೆಲ್​​ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಸಿದ್ದರಾಮಯ್ಯ, ಅಲ್ಲಿ ಇನ್ನಷ್ಟು ಕೈ ಶಾಸಕರು ಪಕ್ಷ ಬಿಡದಂತೆ ಮನವೊಲಿಸುವ ಯತ್ನ ಮಾಡಲಿದ್ದಾರೆ. ಸರ್ಕಾರ ಬಿದ್ದು ಹೋದಲ್ಲಿ ಆಗ ಕನಿಷ್ಠ ಪ್ರತಿಪಕ್ಷದಲ್ಲಾದರೂ ಕೂರಬಹುದು. ಪಕ್ಷದ ನಿಷ್ಠೆ ಉಳಿಸಿಕೊಳ್ಳಿ. ಬಿಜೆಪಿ ಆಮಿಷಕ್ಕೆ ಒಳಗಾಗಿ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಡಿ. ಪಕ್ಷಕ್ಕೆ ಇನ್ನಷ್ಟು ಮುಜುಗರ ಉಂಟುಮಾಡಬೇಡಿ ಎಂದು ಮನವಿ ಮಾಡಲಿದ್ದಾರೆ ಎಂಬ ಮಾಹಿತಿ ಇದೆ.

ನಿನ್ನೆ ಸಂಜೆ ಕೂಡ ಪಕ್ಷದ ನಾಯಕರು ಹೋಟೆಲ್​​ನಲ್ಲಿ ಶಾಸಕರ ಜತೆ ಸಭೆ ನಡೆಸಿದ್ದರು. ಎಂಟಿಬಿ ನಾಗರಾಜ್ ಮನವೊಲಿಕೆ ಯಶಸ್ಸು ಕಂಡಂತೆ ಭಾಸವಾಗಿದ್ದರಿಂದ ಇದೇ ಉತ್ಸಾಹದಲ್ಲಿ ತೆರಳಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಕ್ಷದ ಶಾಸಕರನ್ನು ಉದ್ದೇಶಿಸಿ ಮಾತನಾಡಿದ್ದರು. ಆದರೆ ಇಂದು ಎಲ್ಲವೂ ತಲೆಕೆಳಗಾಗಿದೆ. ಪಕ್ಷದ ಶಾಸಕರನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂಬ ಅನಿವಾರ್ಯ ಪರಿಸ್ಥಿತಿಗೆ ಕಾಂಗ್ರೆಸ್ ಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆ ಶಾಸಕಾಂಗ ಸಭೆ ಕರೆಯಲಾಗಿದೆ.

ಮತ್ತೆರಡು ರಾಜೀನಾಮೆ?

ನಾಳೆ ಇನ್ನಿಬ್ಬರು ಶಾಸಕಿಯರು ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ. ಅಂಜಲಿ ನಿಂಬಾಳ್ಕರ್ ಹಾಗೂ ಸೌಮ್ಯ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಈಗಾಗಲೇ 13 ಶಾಸಕರ ರಾಜೀನಾಮೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಇನ್ನಿಬ್ಬರನ್ನು ಕಳೆದುಕೊಂಡರೆ ಮತ್ತಷ್ಟು ಸಂಕಷ್ಟಕ್ಕೆ ಈಡಾಗಲಿದೆ. ಇದನ್ನು ತಪ್ಪಿಸುವ ಯತ್ನಕ್ಕೂ ಪಕ್ಷದ ನಾಯಕರು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಇದರಿಂದ ನಾಳೆ ಕಲಾಪಕ್ಕೆ ಆಗಮಿಸುವ ಮುನ್ನವೇ ಶಾಸಕಾಂಗ ಪಕ್ಷದ ಸಭೆ ನಡೆಸಿ, ಶಾಸಕರ ಮನವೊಲಿಸಿ ಪಕ್ಷದಲ್ಲೇ ಉಳಿಯುವಂತೆ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.

For All Latest Updates

ABOUT THE AUTHOR

...view details