ಬೆಂಗಳೂರು:ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪುತ್ರ ಹಾಗೂ ವರುಣಾ ಕ್ಷೇತ್ರದ ಶಾಸಕರಾಗಿರುವ ಡಾ. ಯತೀಂದ್ರಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದು, ಶುಭಾಶಯದ ಜೊತೆ ಕಿವಿಮಾತನ್ನು ಹೇಳಿದ್ದಾರೆ.
ಟ್ವೀಟ್ ಮೂಲಕ ಶುಭಾಶಯ ಸಲ್ಲಿಸಿರುವ ಸಿದ್ದರಾಮಯ್ಯ, ವರುಣಾ ಕ್ಷೇತ್ರದ ಶಾಸಕರು ಮತ್ತು ನನ್ನ ಪ್ರೀತಿಯ ಮಗ ಡಾ.ಯತೀಂದ್ರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರುವ ನೀವು ತಂದೆ-ತಾಯಿಗಳಾದ ನಮಗೆ ಒಳ್ಳೆಯ ಮಗನಾದರಷ್ಟೇ ಸಾಲದು, ಪ್ರೀತಿಪಾತ್ರರೆಲ್ಲರ ಮನೆಮಗನಾಗಿ, ಜನನಾಯಕರಾಗಿ ಬೆಳೆಯಬೇಕೆನ್ನುವುದು ನಮ್ಮ ಹಾರೈಕೆ ಎಂದು ಹೇಳಿದ್ದಾರೆ.
ಇಂದಿನಿಂದ ನಾಲ್ಕು ದಿನ ಬಾಗಲಕೋಟೆ ಜಿಲ್ಲಾ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಪುತ್ರನಿಗೆ ಶುಭಾಶಯ ತಿಳಿಸಿ ಮತ್ತೊಂದು ಟ್ವೀಟ್ನಲ್ಲಿ ನಾಡಿನ ಜನತೆಗೆ ಕೆಂಪೇಗೌಡ ಜಯಂತಿಯ ಶುಭಾಶಯ ಕೂಡ ತಿಳಿಸಿದ್ದಾರೆ.
ತಮ್ಮ ಟ್ವೀಟ್ನಲ್ಲಿ, ನಾಡ ಜನತೆಗೆ ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿಯ ಶುಭಾಶಯಗಳು. ನಾಡಪ್ರಭುವಾಗಿ ಕೆಂಪೇಗೌಡರು ನಾಡಿನ ಜನರ ಬಗ್ಗೆ ಹೊಂದಿದ್ದ ಪ್ರೀತಿ, ಕಾಳಜಿ ಮತ್ತು ದೂರದೃಷ್ಟಿ ಆಡಳಿತಗಾರರಿಗೆಲ್ಲರಿಗೂ ಮಾದರಿ ಮತ್ತು ಸ್ಪೂರ್ತಿ ಎಂದಿದ್ದಾರೆ.
ಮುಂದುವರಿದು, ನಾನು ಮುಖ್ಯಮಂತ್ರಿಯಾಗಿದ್ದಾಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭುಗಳ ನಾಮಕರಣ ಮಾಡಿದ್ದಷ್ಟೇ ಅಲ್ಲ, ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆಂಪೇಗೌಡ ಅಧ್ಯಯನ ಪೀಠವನ್ನೂ ಸ್ಥಾಪಿಸಿದ್ದೆ. ಇದು ನಾಡಿಗಾಗಿ ದುಡಿದ ಹಿರಿಯ ಚೇತನಗಳಿಗೆ ಸಲ್ಲಿಸುವ ನಿಜಗೌರವ ಎಂದು ನಂಬಿದ್ದೇನೆ ಎಂದು ಹೇಳಿದ್ದಾರೆ.