ಬೆಂಗಳೂರು:ದೇಶದಲ್ಲಿನ ಬೆಲೆ ಏರಿಕೆಗೆ ಮಿಸ್ಟರ್ ನರೇಂದ್ರ ಮೋದಿ ಕಾರಣ. ದೇಶವನ್ನು ದಿವಾಳಿಯತ್ತ ತಂದಿದ್ದು ಮೋದಿ ಸಾಧನೆ. ಇಂತಹ ಮೋದಿಯನ್ನು ಬಿಜೆಪಿಯವರು ವಿಶ್ವಗುರು ಎನ್ನುತ್ತಾರೆ. ಇವರ ಯೋಗ್ಯತೆಗೆ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳಲೂ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಇಂದು ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿದ್ದರಾಮಯ್ಯ, ತಮ್ಮ ಇಡೀ ಭಾಷಣದುದ್ದಕ್ಕೂ ಪ್ರಧಾನಿ ಮೋದಿಯನ್ನು ಟೀಕಿಸಿದರು. ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಕೇಂದ್ರ ರಾಜ್ಯದ ವಿರುದ್ಧ ಅನುಸರಿಸಿದ ತಾರತಮ್ಯದ ಕುರಿತು ಪ್ರಸ್ತಾಪಿಸಿ ತಮ್ಮ ಬಜೆಟ್ ವಿವರಣೆಗಿಂತಲೂ ಹೆಚ್ಚಾಗಿ ಬಿಜೆಪಿ ವಿರುದ್ಧ ಟೀಕಿಸಿಸಲು ಸಿಎಂ ಸಮಯ ಬಳಸಿಕೊಂಡರು.
ಪ್ರಜಾಪ್ರಭುತ್ವದ ಯಶಸ್ಸಿಗೆ ಪ್ರಬಲ ವಿಪಕ್ಷ ಇರಬೇಕು, ಸರ್ಕಾರದ ತಪ್ಪನ್ನು ಹೇಳುವ ಕೆಲಸ ಮಾಡಬೇಕು. ಆದರೆ ಬಿಜೆಪಿ- ಜೆಡಿಎಸ್ ಸದನ ಬಾಯ್ಕಾಟ್ ಮಾಡಿದ್ದಾರೆ. ರಾಜಕೀಯ ಜೀವನದಲ್ಲಿ ಇದೇ ಮೊದಲು, ವಿಪಕ್ಷ ಗೈರಾಗಿರುವ ಸದನಕ್ಕೆ ಉತ್ತರ ಕೊಡುತ್ತಿದ್ದೇನೆ. ವಿಧಾನಸಭೆಯಲ್ಲಿ ಅನಾಗರಿಕವಾಗಿ ನಡೆದುಕೊಂಡ ಸದಸ್ಯರನ್ನು ಅಮಾನತು ಮಾಡಿದ್ದಾರೆ. ಪೇಪರ್ ಹರಿದು ಉಪಸಭಾಧ್ಯಕ್ಷರ ಮುಖಕ್ಕೆ ಎಸೆದರು. ಮಾರ್ಷಲ್ ಇಲ್ಲದಿದ್ದರೆ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಅದಕ್ಕಾಗಿ 10 ಸದಸ್ಯರ ಅಮಾನತು ಮಾಡಿದ್ದಾರೆ. ಉಳಿದವರು ಬಂದಿಲ್ಲ, ಪರಿಷತ್ಗೂ ಬಂದಿಲ್ಲ. ಗಾಂಧಿ ಪ್ರತಿಮೆ ಎದುರು ಪ್ರತಿಭಟಿಸುವುದಲ್ಲ, ಗೋಡ್ಸೆ ಪ್ರತಿಮೆ ಎದುರು ಪ್ರತಿಭಟಿಸಬೇಕಿತ್ತು ಬಿಜೆಪಿಯವರು, ಗಾಂಧಿ ಕೊಂದವರು ಗಾಂಧಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಎಷ್ಟು ಹಣ ರಾಜ್ಯಕ್ಕೆ ಖರ್ಚು ಮಾಡುತ್ತಿದ್ದೇವೆ. ಯಾವುದಕ್ಕೆಲ್ಲ ಖರ್ಚು ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆ ಜಾರಿಗೊಳಿಸಿದ್ದೇವಾ ಎಂದು ನೋಡಬೇಕಿತ್ತು. ಅದಕ್ಕೆ ಹೇಗೆ ಹಣ ಹೊಂದಿಸಿದ್ದೇವೆ ಎಂದು ನೋಡಬೇಕಿತ್ತು. ಆದರೆ ಅದ್ಯಾವುದನ್ನೂ ನೋಡದೆ ಮಾತಾಡದೆ ವಿಪಕ್ಷ ಸದಸ್ಯರು ಹೊರಗಿದ್ದಾರೆ. ಕಾರಣ ಇಲ್ಲದೆ ಗೈರಾಗಿದ್ದಾರೆ. ಇವರು ಬೇಜವಾಬ್ದಾರಿ ಹಾಗೂ ಜನ ವಿರೋಧಿಗಳು, ಕೇವಲ ಬಿಜೆಪಿಯ ಇಬ್ಬರು ಹಾಗೂ ಜೆಡಿಎಸ್ನ ಮೂವರು ಸದಸ್ಯರು ಮಾತ್ರ ಬಜೆಟ್ ಮೇಲೆ ಮಾತನಾಡಿದ್ದಾರೆ. ಎಪಿಎಂಸಿ ಬಿಲ್ ವಿರುದ್ಧ ಎರಡು ಪಕ್ಷಗಳು ಜೊತೆಯಾಗಿವೆ ಎಂದು ಟೀಕಿಸಿದರು.
ಮಣಿಪುರ ವಿಷಯ ಪ್ರಸ್ತಾಪಿಸಿದ ಸಿದ್ದರಾಮಯ್ಯ ಬಿಜೆಪಿಯವರಿಗೆ ಬೆಂಕಿ ಹಚ್ಚುವುದೇ ಕೆಲಸ, ನಾವು ಜನರ ಜೇಬಿಗೆ ಹಣ ಹಾಕುತ್ತೇವೆ, ಖರ್ಚು ಮಾಡಿ ಎನ್ನುತ್ತೇವೆ. ಇದರಿಂದ ಹಣ ಚಲಾವಣೆಯಾಗಿ ಉದ್ಯೋಗ ಸೃಷ್ಟಿಯಾಗಿ ಜಿಡಿಪಿ ಬೆಳವಣಿಗೆಯಾಗಲಿದೆ ಎಂದರೆ, ಇವರು ಜನರ ಜೇಬಿಗೆ ಕೈಹಾಕಿ ಹಣ ತೆಗೆದುಕೊಳ್ಳುತ್ತಾರೆ. ಹಾಲು, ಮೊಸರಿಗೂ ಜಿಎಸ್ಟಿ ಹಾಕಿದ್ದಾರೆ. ಇವರಿಗೆ ಕಿತ್ತುಕೊಳ್ಳುವುದೇ ಕೆಲಸ. ಅದನ್ನು ಬಡವರಿಗೂ ಕೊಡದೆ ಶ್ರೀಮಂತರಿಗೆ ಕೊಡುತ್ತಾರೆ. ಕಾರ್ಪೊರೇಟ್ ತೆರಿಗೆ ಕಡಿತದಿಂದ ಪ್ರತಿ ವರ್ಷ ಕೇಂದ್ರಕ್ಕೆ 2 ಲಕ್ಷ ಕೋಟಿ ತೆರಿಗೆ ನಷ್ಟವಾಗುತ್ತಿದೆ. ಇದರ ಜೊತೆ ಕಾರ್ಪೊರೇಟ್ ಮತ್ತು ಕೈಗಾರಿಕೆಯವರ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇವರು ರೈತರ ಸಾಲ ಮನ್ನಾ ಮಾಡಿ ಎಂದರೆ ಮಾಡಲ್ಲ, ಕೈಗಾರಿಕೋದ್ಯಮಿ, ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಬಿಜೆಪಿಯವರು ಯಾರ ಪರವಿದ್ದಾರೆ ಎಂದು ಪ್ರಶ್ನಿಸಿದರು.