ಬೆಂಗಳೂರು:ಪ್ರಧಾನಿ ನರೇಂದ್ರ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿವಿಧ ವಿಚಾರಗಳನ್ನು ಮುಂದಿಟ್ಟು ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ. 'ಆನ್ಸರ್ ಮಾಡಿ ಮೋದಿ' ಎಂಬ ಟ್ಯಾಗ್ ಲೈನ್ ಅಡಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಚನ್ನಗಿರಿ ಕ್ಷೇತ್ರದ ಭ್ರಷ್ಟ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಲೋಕಾಯುಕ್ತ ಪೊಲೀಸರು ಸಚಿತ್ರವಾಗಿ ಜಗತ್ತಿನ ಮುಂದೆ ಬಿಚ್ಚಿಟ್ಟರೂ ನೀವು ಮಾತ್ರ ಬಾಯಿ ಬಿಡುತ್ತಿಲ್ಲ ಯಾಕೆ? ಅವರ ಲೂಟಿಯಲ್ಲಿ ನಿಮಗೂ ಪಾಲಿದೆಯಾ ನರೇಂದ್ರ ಮೋದಿ ಅವರೇ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ಸದ್ಯದ ಸರ್ವಶಕ್ತ ನಾಯಕರಾದ ನಿಮ್ಮ ಕೃಪಾಶೀರ್ವಾದ ಇಲ್ಲದೆ ಭ್ರಷ್ಟ ಶಾಸಕರೊಬ್ಬರು ಕಾನೂನಿಗೆ ಅಂಜದೆ, ಮಾನ-ಮರ್ಯಾದೆಗೆ ಅಳುಕದೆ ಪ್ರಜಾತಂತ್ರ ವ್ಯವಸ್ಥೆಯನ್ನೇ ಅಣಕಿಸುವಂತೆ ಮೆರವಣಿಗೆ ಮಾಡಿಸಿಕೊಳ್ಳಲು ಸಾಧ್ಯವೇ ನರೇಂಧ್ರ ಮೋದಿ ಅವರೇ?. ನ ಖಾವೂಂಗಾ, ನಾ ಖಾನೆ ದೂಂಗಾ ಎಂಬ ನಿಮ್ಮ ಘೋಷಣೆಯನ್ನು ಈಗ ನೀವು 'ತುಮ್ ಖಾವೋ, ಮುಜೆ ಬಿ ಖಿಲಾವೋ' ( ನೀವು ತಿನ್ನಿ, ನನಗೂ ತಿನ್ನಿಸಿ) ಎಂದು ಬದಲಾಯಿಸಿ ಕೊಂಡಿದ್ದೀರಾ?, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಪಕ್ಷದ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಎಂಬ ದಲಿತ ನಾಯಕರು ಲಂಚ ಪಡೆಯುವಾಗ ಕ್ಯಾಮರಾದ ಕಣ್ಣಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ತಕ್ಷಣ ವಾಜಪೇಯಿ ಅವರು ಲಕ್ಷ್ಮಣ್ ಅವರಿಂದ ರಾಜೀನಾಮೆ ಕೊಡಿಸಲಿಲ್ಲವೇ ಮೋದಿ ಜೀ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
ಇದು ನರೇಂದ್ರ ಮೋದಿ ಕಾಲವೇ?:ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತ್ರವಲ್ಲ ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ಸಂಪಂಗಿ ಮೊದಲಾದವರು ಭ್ರಷ್ಟಾಚಾರದ ಆರೋಪದಲ್ಲಿ ಸಚಿವ ಸ್ಥಾನವನ್ನು ಕಳೆದುಕೊಂಡು ಜೈಲುಪಾಲಾದರಲ್ಲ?. ಈಗ್ಯಾಕೆ ಹೀಗೆ ನರೇಂದ್ರ ಮೋದಿ ಜೀ? ಸದನದಲ್ಲಿ ಬ್ಲೂಫಿಲ್ಮ್ ನೋಡಿದ್ದ ಕಾರಣಕ್ಕಾಗಿ ಮೂವರು ಬಿಜೆಪಿ ನಾಯಕರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅತ್ಯಾಚಾರದ ಆರೋಪ ಹೊತ್ತಿದ್ದ ಇನ್ನೊಬ್ಬ ಸಚಿವರೂ ರಾಜೀನಾಮೆ ನೀಡಬೇಕಾಯಿತು. ಅದು ವಾಜಪೇಯಿ ಕಾಲ, ಇದು ನರೇಂದ್ರ ಮೋದಿ ಕಾಲವೇ? ಎಂದು ಖಾರವಾಗಿ ಪ್ರಶ್ನೆ ಹಾಕಿದ್ದಾರೆ.
ಯಾಕೆ ಉತ್ತರಿಸುತ್ತಿಲ್ಲ?: ಕಳೆದ ಬಾರಿ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ 10 % ಕಮಿಷನ್ ಸರ್ಕಾರ ಎಂದು ಆಧಾರ ರಹಿತ ಆರೋಪ ಮಾಡಿದ್ದಿರಿ. ಈ ಬಾರಿ ನಿಮ್ಮ ಸರ್ಕಾರ 40 % ಕಮಿಷನ್ ಕೇಳಿ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರು ನಿಮಗೆ ಪತ್ರ ಬರೆದರೂ ಯಾಕೆ ಉತ್ತರಿಸುತ್ತಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸಂತೋಷ್ ಲಾಡ್ ಅವರ ಮೇಲೆ ಅಕ್ರಮ ಗಣಿಗಾರಿಕೆಯ ಆರೋಪ ಕೇಳಿ ಬಂದಿದ್ದಕ್ಕಾಗಿ ರಾಜೀನಾಮೆ ಕೊಡಿಸಿದ್ದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ ನಮ್ಮ ಸರ್ಕಾರದ ವಿರುದ್ಧದ ಎಂಟು ಆರೋಪಗಳನ್ನು ಧೈರ್ಯದಿಂದ ಸಿಬಿಐ ತನಿಖೆಗೆ ಒಪ್ಪಿಸಿದ್ದೆ ಗೊತ್ತಾ ನರೇಂದ್ರ ಮೋದಿ ಜೀ? ಎಂದು ಕೇಳಿದ್ದಾರೆ.
ಹಿಂದೆ ಕರ್ನಾಟಕಕ್ಕೆ ಬಂದಿದ್ದ ನೀವು ಕರ್ನಾಟಕದ ಕಾಂಗ್ರೆಸ್ ದೆಹಲಿಯ ಹೈಕಮಾಂಡ್‌ಗೆ ಎಟಿಎಂ ಎಂದು ಗೇಲಿ ಮಾಡಿದ್ದೀರಿ. ನಿಮ್ಮ ಸಚಿವರು ಮತ್ತು ಶಾಸಕರು ಕೋಟಿ ಕೋಟಿ ಲೂಟಿ ಮಾಡಿ ನಿರ್ಭೀತಿಯಿಂದ ಇದ್ದಾರೆ ಎಂದರೆ ಕರ್ನಾಟಕ ರಾಜ್ಯ ನಿಮ್ಮ ಪಕ್ಷದ ಎಟಿಎಂ ಎಂದು ಅರ್ಥೈಸಬಹುದಾ?. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಲ್ಲಿ ಎಲ್ಲಿಯವರೆಗೆ ಲಂಚದ ಹಣದಲ್ಲಿ ಪಾಲು ಬಿಜೆಪಿ ಹೈಕಮಾಂಡ್ ಗೆ ಸಂದಾಯವಾಗುತ್ತೋ ಅಲ್ಲಿಯ ವರೆಗೆ ಭ್ರಷ್ಟರು, ದುಷ್ಟರು ಎಲ್ಲರೂ ಸುರಕ್ಷಿತ ಎಂದು ತಿಳಿದುಕೊಳ್ಳಬಹುದೇ? ಎಂದು ಕೇಳಿದ್ದಾರೆ.
ನರೇಂದ್ರ ಮೋದಿಯವರೇ ಕರ್ನಾಟಕದ ರೈತರ ಬದುಕು ನರಕರೂಪಿಯಾಗುತ್ತಿದೆ. ಕೇಂದ್ರ, ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ರಾಕ್ಷಸ ರೀತಿಯಲ್ಲಿ ಕಾಡುತ್ತಿವೆ. 2023 ಬರುತ್ತಿದ್ದಂತೆಯೆ ರೈತರು ಬೆಳೆದ ಎಲ್ಲ ಕೃಷಿ ಉತ್ಪನ್ನಗಳ ಬೆಲೆಗಳು ಪಾತಾಳಕ್ಕೆ ಕುಸಿಯುತ್ತಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ 8ನೇ ಕಂತಿನ ಪ್ರಶ್ನೆ ಹಾಗೂ ಸವಾಲು ಹಾಕಿರುವ ಸಿದ್ದರಾಮಯ್ಯ, ನೀವು ಮೈಸೂರು ಮಂಡ್ಯ ಭಾಗಕ್ಕೆ ಬರುತ್ತಿರುವುದರಿಂದ ಆ ಭಾಗದ ಸಮಸ್ಯೆಗಳ ಕುರಿತಾದ ಸಮಸ್ಯೆಗಳೇನು ಎಂಬ ಕುರಿತು ಮಾಹಿತಿ ತರಿಸಿಕೊಳ್ಳಿ ಹಾಗೂ ರೈತರೊಂದಿಗೆ, ಪತ್ರಕರ್ತರೊಂದಿಗೆ ಮಾತನಾಡಿದರೆ ಈ ಸಮಸ್ಯೆಗಳು ತಿಳಿಯುತ್ತವೆ. ಆದರೆ ನಿಮ್ಮದೇನಿದ್ದರೂ ಹೇಳುವುದಷ್ಟೆ ಆಗಿದೆ, ಕೇಳಿಸಿಕೊಂಡು ಅಭ್ಯಾಸವೆ ಇಲ್ಲವೆ?. ಮಾತೆತ್ತಿದರೆ ಭಾರತದ ಪರಂಪರೆಯ ಬಗ್ಗೆ ಮಾತನಾಡುತ್ತೀರಿ. ಭಾರತದ ಪ್ರಾಚೀನ ಜನಪರ ಪರಂಪರೆಯ ಶ್ರೀಮಂತಿಕೆ ಇರುವುದು ಕೇವಲ ಹೇಳುವ ಧಾರ್ಷ್ಟ್ಯದ ಗುಣದಲ್ಲಿ ಅಲ್ಲ. ಕೇಳಿಸಿಕೊಳ್ಳುವುದರಲ್ಲಿ ಇದೆ. ಉಪನಿಷತ್ ಅಂದರೇನೆ ಗುರು ಶಿಷ್ಯ ಇಬ್ಬರೂ ಒಟ್ಟಿಗೆ ಕೂತು ನಡೆಸುವ ಸಂವಾದ ಎಂದು ಅರ್ಥ ಎಂದು ಹೇಳಿದ್ದಾರೆ.
ಹಾಗಾಗಿಯೇ ಸಹನಾವವತು, ಸಹನೌಭುನಕ್ತು ಎಂದು ಹೇಳುವ ಮಂತ್ರವು ಮಾ ವಿದ್ವಿಷಾವ ಹೈ ಎಂದು ಮುಗಿಯುತ್ತದೆ. ಇಲ್ಲಿ ಸ್ವ ಎಂಬುದಿಲ್ಲ. ಸಹ ಎಂಬ ಮಾತು ಇದೆ. ನನ್ನನ್ನು ಪೋಷಿಸು ಎಂದು ಕೇಳುವ ಬದಲು ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸುವ ಉಪನಿಷತ್ ಮಂತ್ರವು ನಮ್ಮಲ್ಲಿ ದ್ವೇಷ ಬಾರದೆ ಇರಲಿ ಎಂದು ಕೋರುತ್ತದೆ. ಇದರ ಲವಲೇಶ ಅಂಶವಾದರೂ ನಿಮ್ಮಲ್ಲಿ ಮತ್ತು ನಿಮ್ಮ ಪಕ್ಷದಲ್ಲಿ ಪಾಲನೆಯಾಗುತ್ತದೆಯೆ?. ಹಾಗಿದ್ದ ಮೇಲೂ ಭಾರತೀಯ ಪರಂಪರೆ, ಸನಾತನ ಧರ್ಮ ಎಂದು ನೀವು ಮತ್ತು ನಿಮ್ಮ ಪಕ್ಷದವರು ಹೇಳುವುದರಲ್ಲಿ ಅರ್ಥ ಇದೆಯೇ?. ಆದ್ದರಿಂದ ತಾವು ಮಾಧ್ಯಮಗಳೊಂದಿಗೆ, ರೈತರೊಂದಿಗೆ, ರೈತ ಸಂಘಟನೆಗಳೊಂದಿಗೆ ಕೂತು ಮುಕ್ತ ಸಂವಾದ ಮಾಡಿ ಅವರ ಸಂಕಷ್ಟವೇನೆಂದು ನಿಮಗೆ ಅರ್ಥವಾದರೂ ಆಗಬಹುದು. ಅದಕ್ಕೂ ಮೊದಲು ಈ 11 ಪ್ರಶ್ನೆಗೆ ಉತ್ತರಿಸಿ ಎಂದು 8ನೇ ಕಂತಿನ ಪ್ರಶ್ನೆ ಹಾಗೂ ಸವಾಲನ್ನು ಮುಂದಿಟ್ಟಿದ್ದಾರೆ.
1. ಅರಿಶಿಣ: ಮಂಡ್ಯ, ಮೈಸೂರಿನ ಕೆಲವು ಕಡೆ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ರೈತರು ವ್ಯಾಪಕವಾಗಿ ಅರಿಶಿಣ ಬೆಳೆಯುತ್ತಾರೆ. ಸರ್ಕಾರದ ತೋಟಗಾರಿಕೆ ಇಲಾಖೆಯ ಲೆಕ್ಕಾಚಾರದ ಪ್ರಕಾರ ಒಂದು ಎಕರೆಯಲ್ಲಿ ಅರಿಶಿಣ ಬೆಳೆಯಲು ಕನಿಷ್ಠ 1,43,325 ರೂಪಾಯಿಗಳಷ್ಟು ಖರ್ಚು ತಗಲುತ್ತದೆ. ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟದ ಪ್ರಕಾರ 2.83 ಲಕ್ಷ ರೂಪಾಯಿಗಳಷ್ಟು ಖರ್ಚು ಬರುತ್ತದೆ. ಡಾ. ಸ್ವಾಮಿನಾಥನ್ ವರದಿಯ ಪ್ರಕಾರ ಲಾಭ ಸೇರಿಸಿದರೆ ಇದರ ದುಪ್ಪಟ್ಟು ಬೆಲೆ ಸಿಗಬೇಕು. ಒಂದು ಎಕರೆಯಲ್ಲಿ ಸಾಧಾರಣವಾಗಿ 24 ಕ್ವಿಂಟಾಲ್ ಅರಿಶಿಣ ಸಿಗುತ್ತದೆ ಎಂದರೆ 15-20 ಸಾವಿರ ರೂಪಾಯಿಗಳಷ್ಟು ಪ್ರತಿ ಕ್ವಿಂಟಾಲ್ ಅರಿಶಿಣಕ್ಕೆ ಬೆಲೆ ಸಿಕ್ಕರೆ ರೈತ ಉಳಿದುಕೊಳ್ಳುತ್ತಾನೆ. ಆದರೆ ಈಗ 6 ಸಾವಿರ ರೂ.ಗಳಿಗಿಂತಲೂ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಎಂಎಸ್‍ಪಿಯಲ್ಲೂ ಖರೀದಿಸುತ್ತಿಲ್ಲ. ಇದರಿಂದಾಗಿ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಗೆ ಒಂದು ಬೆಳೆ/ ಉತ್ಪನ್ನ ಎಂದು ಘೋಷಿಸಿದ್ದೀರಿ, ಘೋಷಣೆಗಳಿಂದ ನಮ್ಮ ರೈತರ ಹೊಟ್ಟೆ ತುಂಬುವುದಿಲ್ಲ ಎಂಬುದಕ್ಕೆ ಇಂದು ರೈತರು ಎದುರಿಸುತ್ತಿರುವ ಸಂಕಷ್ಟಗಳೇ ಕಾರಣ.
2. ನೀವು ನಿಮ್ಮ ಅತ್ಯಾಪ್ತರಾದ ಅದಾನಿ, ಅಂಬಾನಿ ಮುಂತಾದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದುಬಿಟ್ಟಿರಿ. ದೆಹಲಿಯಲ್ಲಿ ರೈತರು ವೀರೋಚಿತ ಹೋರಾಟ ನಡೆಸಿದ ಕಾರಣ ಕೇಂದ್ರ ಸರ್ಕಾರ ಮಾಡಿದ್ದ ಕಾಯ್ದೆಗಳನ್ನು ವಾಪಸ್ ಪಡೆದಿದ್ದೀರಿ. ಆದರೆ ಬಿಜೆಪಿ ಆಡಳಿತದ ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಈ ಕಾಯ್ದೆಗಳನ್ನು ಹಾಗೆಯೆ ಉಳಿಸಿಕೊಳ್ಳುವಂತೆ ಒತ್ತಡ ಹಾಕಿ ಈ ಮನೆಹಾಳು ಕಾಯ್ದೆಗಳನ್ನು ಹಾಗೆ ಉಳಿಸಿದ್ದೀರಿ. ಈ ಕಾಯ್ದೆಗಳಿಂದ ಆಗಿರುವ ಭೀಕರ ಹಾನಿಯ ಬಗ್ಗೆ ನಿಮಗೆ ತಿಳುವಳಿಕೆ ಇದೆಯೆ?