ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ರಾಜ್ಯ ಭೇಟಿ ಸಂದರ್ಭದಲ್ಲಿ ಆನ್ಸರ್ ಮಾಡಿ ಮೋದಿ ಎಂಬ ಟ್ಯಾಗ್ಲೈನ್ ಅಡಿ ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕಾಲೆಳೆಯುವ ಯತ್ನ ಮಾಡಿದ್ದಾರೆ. ಟ್ವೀಟ್ನಲ್ಲಿ ಸಿದ್ದರಾಮಯ್ಯ, ಸರ್ವಶಕ್ತ ಪ್ರಧಾನ ಮಂತ್ರಿ ಎಂದು ಬೆಂಬಲಿಗರಿಂದ ಬಹುಪರಾಕ್ ಹಾಕಿಸಿಕೊಳ್ಳುತ್ತಿರುವ ನರೇಂದ್ರ ಮೋದಿ ಅವರೇ, ಗೌತಮ್ ಅದಾನಿ ಎಂಬ ಉದ್ಯಮಿ ಬಗ್ಗೆ ಮಾತನಾಡಲು ನಿಮಗೆ ಮುಜುಗರ ಯಾಕೆ? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಪ್ರಶ್ನೆಗಳಿಗೆ ಉತ್ತರಿಸಲು ಭಯ ಯಾಕೆ? ಎಂದು ಪ್ರಶ್ನಿಸಿದ್ದಾರೆ.
2014ರಲ್ಲಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 609ನೇ ಸ್ಥಾನದಲ್ಲಿದ್ದ ಗೌತಮ್ ಅದಾನಿ ಅವರು 2022ರಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದು ಹೇಗೆ? 2014ರಲ್ಲಿ 8 ಬಿಲಿಯನ್ ಡಾಲರ್ ಸಂಪತ್ತಿನ ಗೌತಮ್ ಅದಾನಿ ಅವರು 2022ರಲ್ಲಿ 140 ಬಿಲಿಯನ್ ಡಾಲರ್ನ ಧನಿಕ ಹೇಗಾದರು ನರೇಂದ್ರ ಮೋದಿ ಜೀ? ನಿಮ್ಮ ಭರವಸೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ, ಕೊಟ್ಟಿದ್ದು ಶೇ.10.79ರ ಪ್ರಮಾಣದ ನಿರುದ್ಯೋಗದ ದಾಖಲೆ. ವಿದ್ಯಾವಂತ ಯುವಕರನ್ನು ಪಕೋಡಾ ಮಾರಲು ಹೇಳುವ ನೀವು, ಯುವಜನರಿಗೆ ದುಡ್ಡು ಮಾಡುವ ಈ ಕಲೆಯನ್ನು ಅದಾನಿಯವರಿಂದ ಯಾಕೆ ಪಾಠ ಮಾಡಿಸಬಾರದು ಮೋದಿ? ಎಂದು ಪ್ರಶ್ನಿಸಿದ್ದಾರೆ.
ಎಲ್‌ಐಸಿ ಮತ್ತಿತರ ಸಾರ್ವಜನಿಕ ಕ್ಷೇತ್ರದ ಹಣಕಾಸು ಸಂಸ್ಥೆಗಳು ಗೌತಮ್ ಅದಾನಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದೆಷ್ಟು? ಯಾರ ಸಲಹೆ ಮತ್ತು ಭರವಸೆಯಿಂದ ಜನರ ದುಡ್ಡನ್ನು ಈ ಸಂಸ್ಥೆಗಳು ಅದಾನಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದವು ನರೇಂದ್ರ ಮೋದಿ? ಇಲ್ಲಿಯವರೆಗೆ ಗೌತಮ್ ಅದಾನಿಯವರು ಖರೀದಿಸಿರುವ ರಾಷ್ಟ್ರೀಯ ಬಿಜೆಪಿ ಪಕ್ಷದ ಚುನಾವಣಾ ಬಾಂಡ್ಗಳ ಒಟ್ಟು ಮೌಲ್ಯ ಎಷ್ಟು?, ಇದನ್ನು ಹೊರತುಪಡಿಸಿ ಪಕ್ಷಕ್ಕೆ ಅವರು ಅಧಿಕೃತವಾಗಿ ಕೊಟ್ಟಿರುವ ದೇಣಿಗೆ ಎಷ್ಟು? ದೇಶದ ಆರು ವಿಮಾನ ನಿಲ್ದಾಣಗಳನ್ನು ಗೌತಮ್ ಅದಾನಿ ಸಂಸ್ಥೆ ತಮ್ಮ ವಶಕ್ಕೆ ತೆಗೆದುಕೊಳ್ಳಲು ಕೇಂದ್ರ ಬಿಜೆಪಿ ಸರ್ಕಾರ ನಿಯಮಾವಳಿಗಳಲ್ಲಿ ಮಾಡಿರುವ ಬದಲಾವಣೆ ಕಾರಣವೇ? ಕೆಲವು ವಿಮಾನ ನಿಲ್ದಾಣಗಳ ಮಾಲೀಕರು ತನಿಖಾ ಸಂಸ್ಥೆಗಳಿಗೆ ಹೆದರಿ ಷೇರು ವಿಕ್ರಯ ಮಾಡಿರುವುದು ನಿಜವೇ ನರೇಂದ್ರ ಮೋದಿ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.
ಗೌತಮ್ ಅದಾನಿ ಶೆಲ್ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿರುವ ಅಂದಾಜು 20,000 ಕೋಟಿ ರೂಪಾಯಿ ಯಾರದ್ದು? ಈ ಬಗ್ಗೆ ಇ.ಡಿ ಗೆ ಏನಾದರೂ ಮಾಹಿತಿ ಇದೆಯೇ? ಈ ಶೆಲ್ ಕಂಪನಿಗಳಿಗೂ ಗೌತಮ್ ಅದಾನಿ ಅವರ ಸಹೋದರ ವಿನೋದ್ ಅದಾನಿಯವರಿಗೂ ಏನು ಸಂಬಂಧ ? ಭಾರತದ ಬ್ಯಾಂಕುಗಳಿಗೆ 13,500 ಕೋಟಿ ರೂಪಾಯಿ ವಂಚಿಸಿದ್ದ ಮೆಹೋಲ್ ಚೋಕ್ಸಿ ಮೇಲೆ ಇಂಟರ್ ಪೋಲ್ ಹೊರಡಿಸಿದ್ದ ಲುಕ್ ಔಟ್ ನೋಟಿಸನ್ನು ವಾಪಸ್ ಪಡೆದಿದ್ದು ಯಾಕೆ ನರೇಂದ್ರ ಮೋದಿ? ಎಂಬ ಪ್ರತಿಪಕ್ಷ ನಾಯಕ ಪ್ರಶ್ನಿಸಿದ್ದಾರೆ.
ಮೀಸಲಾತಿ ತೀರ್ಮಾನ ಪ್ರಾಮಾಣಿಕವಲ್ಲ, ಚುನಾವಣಾ ಗಿಮಿಕ್ -ಸಿದ್ದರಾಮಯ್ಯ:ರಾಜ್ಯ ಸರ್ಕಾರ ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿಯ ಕುರಿತು ತೆಗೆದುಕೊಂಡ ತೀರ್ಮಾನಗಳು ಸಮುದಾಯಗಳಲ್ಲಿ ಹಲವು ರೀತಿಯ ಗೊಂದಲ, ಅಶಾಂತಿಯನ್ನು ಹುಟ್ಟು ಹಾಕಿವೆ. ಮುಖ್ಯಮಂತ್ರಿಗಳು ಮೀಸಲಾತಿಯ ಸಮಸ್ಯೆಯನ್ನು ಬಗೆಹರಿಸಿದ್ದೇನೆಂದು ಹೇಳಿಕೆ ಕೊಟ್ಟಿದ್ದಾರೆ. ಪರಿಶಿಷ್ಟ ಜಾತಿಗಳ ಬಹುಪಾಲು ಮುಖಂಡರು ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಸರ್ಕಾರ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಡಿಲ್ಲ. ನಾಗಮೋಹನ ದಾಸ್ ಅವರ ಸಮಿತಿಯ ಶಿಫಾರಸ್ಸುಗಳಂತೆ ಮೀಸಲಾತಿ ಹೆಚ್ಚಿಸುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು 6 ತಿಂಗಳುಗಳಾಗುತ್ತಾ ಬಂದಿದೆ ಎಂದು ಹೇಳಿದರು.
ಸರ್ಕಾರ ಕೇವಲ ಚುನಾವಣಾ ಗಿಮಿಕ್ಕು ಮಾಡುತ್ತಿದೆ. ಸರ್ಕಾರಕ್ಕೆ ಪ್ರಾಮಾಣಿಕ ಕಾಳಜಿ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸರ್ಕಾರಕ್ಕೆ ನಿಜವಾಗಿಯೂ ಸಂವಿಧಾನದ ಆಶಯಗಳಲ್ಲಿ ನಂಬಿಕೆ ಇದ್ದರೆ, ಅದಕ್ಕೆ ಕರುಣೆ, ತಾಯ್ತನದ ಗುಣಗಳು ಇದ್ದಿದ್ದರೆ ಇಡಬ್ಲ್ಯುಎಸ್‍ನಲ್ಲಿ ಶೇ.10 ರಷ್ಟು ಜನಸಂಖ್ಯೆ ಇಲ್ಲದ ಕಾರಣ ಅದರಲ್ಲಿನ ಕೆಲವು ಪರ್ಸೆಂಟ್ ಮೀಸಲಾತಿಯನ್ನು ಉಳಿದ ಹಿಂದುಳಿದ ವರ್ಗಗಳಿಗೆ ಹಂಚಿಕೆ ಮಾಡಬಹುದಾಗಿತ್ತು. ಹಾಗೆ ಮಾಡುವುದರಿಂದ ಹಲವು ಸಮಸ್ಯೆಗಳು ಬಗೆಹರಿಯುತ್ತಿದ್ದವು. ನಾನು ಸರ್ಕಾರಕ್ಕೆ ಹಲವು ಬಾರಿ ಇದೆ ಸಲಹೆ ಕೊಟ್ಟಿದ್ದೆ. ಆದರೆ ಇದನ್ನೆಲ್ಲ ಕಾಲ ಕೆಳಕ್ಕೆ ಹಾಕಿಕೊಂಡು ಹೊಸಕಿ ಹಾಕಲಾಗಿದೆ. ಸರ್ಕಾರದ ಅಮಾನವೀಯ ನಿರ್ಧಾರದಿಂದ ಅತಿ ಹೆಚ್ಚು ಅನ್ಯಾಯಕ್ಕೆ ಒಳಗಾಗಿರುವವರು ಪ್ರವರ್ಗ-1, ಪ್ರವರ್ಗ- 2 ಗಳಲ್ಲಿ ಹಿಂದುಳಿದವರು ಮತ್ತು ಪ್ರವರ್ಗ- 2ಬಿ ದಲ್ಲಿದ್ದ ಮುಸ್ಲಿಮರು. ಈ ಮೂರೂ ಪ್ರವರ್ಗಗಳಲ್ಲಿ ಶೇ.48-50 ರಷ್ಟು ಜನಸಂಖ್ಯೆ ಇದೆಯೆಂದು ಹಲವು ವರದಿಗಳು ಹೇಳಿವೆ. ಇಷ್ಟು ಜನಸಂಖ್ಯೆಗೆ ಈಗ ಕೇವಲ ಶೇ.19 ರಷ್ಟು ಮಾತ್ರ ಮೀಸಲಾತಿ ಇದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಹಬ್ಬದಿಂದ ರಾಜಧಾನಿಯ ಭಿನ್ನತೆ ವಿಶ್ವಕ್ಕೆ ಪರಿಚಯ: ಚಂದ್ರಶೇಖರ್ ಕಂಬಾರ