ಕರ್ನಾಟಕ

karnataka

ETV Bharat / state

ಗೋಡ್ಸೆ ಪ್ರತಿಮೆ ಪೂಜಿಸುವವರು ದೇಶಪ್ರೇಮದ ಪಾಠ ಬೋಧಿಸುತ್ತಿರುವುದು ವಿಪರ್ಯಾಸ: ಸಿದ್ದರಾಮಯ್ಯ - ಬಿಜೆಪಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಇಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಹುತಾತ್ಮರ ದಿನ ಕಾರ್ಯಕ್ರಮ ಆಚರಿಸಿದರು. ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗಾಂಧೀಜಿ ಹತ್ಯೆ ಮಾಡಿರುವ ನಾಥೂರಾಮ್ ಗೋಡ್ಸೆಯ ಪ್ರತಿಮೆ ಮಾಡಿ ಪೂಜಿಸುವ ವ್ಯವಸ್ಥೆ ದೇಶದಲ್ಲಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ
Siddaramaiah

By

Published : Jan 30, 2021, 1:36 PM IST

ಬೆಂಗಳೂರು:ಗಾಂಧೀಜಿ ಅವರನ್ನು ಹತ್ಯೆ ಮಾಡಿರುವ ನಾಥೂರಾಮ್ ಗೋಡ್ಸೆಯ ಪ್ರತಿಮೆ ಮಾಡಿ ಪೂಜಿಸುವ ವ್ಯವಸ್ಥೆ ದೇಶದಲ್ಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ್ದಾರೆ.

ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಾಂಧೀಜಿಯವರನ್ನು ಕೊಂದವರ ಪ್ರತಿಮೆ ಮಾಡಿ ಪೂಜಿಸುವವರು ದೇಶಭಕ್ತರಾಗಲು ಹೇಗೆ ಸಾಧ್ಯ, ಇಂಥವರು ದೇಶಭಕ್ತಿ ಬಗ್ಗೆ ಬೇರೆಯವರಿಗೆ ಪಾಠ ಮಾಡಲು ಹೊರಟಿದ್ದಾರೆ. ಆರ್​ಎಸ್​ಎಸ್​​ನವರಾಗಲಿ, ಬಿಜೆಪಿಯವರಾಗಲಿ ದೇಶದ ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿದ್ದಾರಾ? ಇವರಿಂದ ಯಾವ ದೇಶಭಕ್ತಿಯ ಪಾಠ ಕಲಿಯಲು ಸಾಧ್ಯ ಎಂದು ಪ್ರಶ್ನಿಸಿದರು.

ಗಾಂಧೀಜಿ ಅವರು ಯಾವ ವಿಚಾರದ ವಿರುದ್ಧ ಹೋರಾಡಿದ್ದರೋ ಅದರ ವಿರುದ್ಧ ಇದ್ದವರು ದೇಶ ಆಳುತ್ತಿದ್ದಾರೆ. ಇದರಿಂದ ಗಾಂಧಿ ಪ್ರಾಣತ್ಯಾಗದ ಬೆಲೆ ಕಳೆದುಕೊಳ್ಳುತ್ತಿದೆ. ಅವರ ಕನಸಿನ ದೇಶ ಕಟ್ಟುವ ಕಾರ್ಯ ನಾವು ಮಾಡಬೇಕು. ಹಿಂಸೆ ನಿಲ್ಲಿಸಲು ಗಾಂಧೀಜಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಈ ವೇಳೆ, ಸಮಯ ಕಾಯ್ದು ನಾಥೂರಾಮ್ ಗೋಡ್ಸೆ ಅವರ ಹತ್ಯೆ ಮಾಡಿದನು. ಅವರು ಎಷ್ಟು ಹೋರಾಟ ನಡೆಸಿದರೋ, ಅಷ್ಟು ಸಾಮರಸ್ಯ ಮೂಡಿತ್ತು. ಇವರ ಜೊತೆ ನೂರಾರು ಮಂದಿ ಬಲಿದಾನ ಮಾಡಿದ್ದು, ಇದರ ಫಲ ಸಿಗಬೇಕಿದೆ. ದಾಸ್ಯದಿಂದ ದೇಶ ಬಿಡುಗಡೆ ಆಗಬೇಕೆಂದು ಬಲಿದಾನ ಮಾಡಿದರು. ನಮ್ಮನ್ನು ನಾವು ಆಳುವ ವ್ಯವಸ್ಥೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನೆಲ್ಲ ನೆನೆಯಬೇಕಿದೆ ಎಂದರು.

ಓದಿ: ನಾವು ಕರ್ನಾಟಕದಲ್ಲಿರುವುದು ದೇವರ ದಯೆ.. ಮಹಾ ಸಿಎಂಗೆ ಮರಾಠಿ ಭಾಷಿಕರಿಂದಲೇ ಪ್ರತ್ಯುತ್ತರ

ಗಾಂಧೀಜಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣ ತೆತ್ತರು. ಬಿಜೆಪಿಯವರು ದೇಶ ಹಾಳು ಮಾಡುತ್ತಿದ್ದಾರೆ. ಇವರ ವಿರುದ್ಧ ಎರಡನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿಯಾಗಬೇಕಿದೆ. ಯಾರೂ ನೆಮ್ಮದಿಯಿಂದ ಇರದ ವಾತಾವರಣ ಮಾಡುತ್ತಿದ್ದಾರೆ. ಕಾರ್ಮಿಕ, ರೈತ ವಿರೋಧಿ, ಸಾಮರಸ್ಯ ಕೆಡಿಸುವ, ಅನಗತ್ಯ ಕಾನೂನನ್ನು ಜಾರಿಗೆ ತರುತ್ತಿದ್ದಾರೆ. ರೈತರು ಎರಡು ತಿಂಗಳಿಂದ ದಿಲ್ಲಿಯಲ್ಲಿ ಹೋರಾಡುತ್ತಿದ್ದಾರೆ. ನರೇಂದ್ರ ಮೋದಿ ದೇಶದಲ್ಲಿ‌ ಏನೂ ನಡೆಯುತ್ತಿಲ್ಲ ಅನ್ನುವ ರೀತಿ ಪ್ರಸನ್ನ ವದನರಾಗಿದ್ದಾರೆ. ಕಾನೂನು ರೈತ ಪರವಾಗಿದೆ ಎಂದು ಹೇಳಿ ಸುಳ್ಳನ್ನು ನಿಜವಾಗಿಸುವ ನಾಚಿಕೆಗೆಟ್ಟ ಜನ. ಇವರ ಕೈಲಿ ದೇಶದ ಅಧಿಕಾರ ಸಿಕ್ಕಿಬಿಟ್ಟಿದೆ. ದೇಶದಲ್ಲಿ ಬಿಜೆಪಿ ಕಪಿಮುಷ್ಠಿಯಿಂದ ದೇಶ ರಕ್ಷಿಸುವ ಹೋರಾಟ ನಡೆಯಬೇಕು. ಇವರು ಅಧಿಕಾರದಲ್ಲಿ ಇದ್ದಷ್ಟೂ ದಿನ ದೇಶಕ್ಕೆ ಉಳಿಗಾಲವಿಲ್ಲ. ಇವರನ್ನು ತೊಲಗಿಸಬೇಕಿದೆ. ಬಿಜೆಪಿ ಕಿತ್ತೊಗೆಯವ ಕಾರ್ಯ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಆ ಸಂಕಲ್ಪ ಮಾಡೋಣ. ಎಲ್ಲ ಸೇರಿ ಹೋರಾಡೋಣ ಎಂದರು.

ABOUT THE AUTHOR

...view details