ಬೆಂಗಳೂರು: ಸಿಎಂ ಬಿ ಎಸ್ ಯಡಿಯೂರಪ್ಪ ಹಾಗೂ ಪ್ರತಿಪಕ್ಷ ನಾಯಕ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಮಾರಂಭವೊಂದರಲ್ಲಿ ಎದುರು ಬದುರಾಗುವ ಸನ್ನಿವೇಶ ನಿರ್ಮಾಣವಾಯಿತು.
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಂಡಿಸಿದ್ದ ಬಜೆಟನ್ನು ತಿರಸ್ಕರಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸಭಾತ್ಯಾಗ ಮಾಡಿ ತೆರಳಿತ್ತು. ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯುದ್ದಕ್ಕೂ ಸಿಎಂ ಬಿಎಸ್ವೈ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸುಪ್ರೀಂಕೋರ್ಟ್ ನಿಂದ ಜಾಮೀನು ಅರ್ಜಿ ವಜಾಗೊಂಡಿರುವ ಸಿಎಂ ನಿರೀಕ್ಷಣಾ ಜಾಮೀನಿನ ಮೇಲೆ ಓಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದರು. ರಾಜ್ಯ ಸರ್ಕಾರಕ್ಕೆ ಬಜೆಟ್ ಮಂಡಿಸುವ ನೈತಿಕತೆಯೇ ಇಲ್ಲ ಎಂದು ಜರಿದಿದ್ದರು.
ಸಮಾರಂಭವೊಂದರಲ್ಲಿ ಎದುರುಬದುರಾದ ಹಾಲಿ, ಮಾಜಿ ಸಿಎಂಗಳು ಇದೆಲ್ಲಾ ಘಟನೆಗಳ ಬಳಿಕ ಸಂಜೆ ಹಾಲಿ ಹಾಗೂ ಮಾಜಿ ಸಿಎಂಗಳು ಎದುರು ಬದುರಾಗಿದ್ದಾರೆ. ಮಾಜಿ ಸಚಿವ ಹಾಗೂ ಸಾಗರ ವಿಧಾನಸಭೆ ಕ್ಷೇತ್ರ ಶಾಸಕ ಹರತಾಳ್ ಹಾಲಪ್ಪ ಪುತ್ರಿ ವಿವಾಹದಲ್ಲಿ ಭೇಟಿಯಾದ ಹಾಲಿ ಮಾಜಿ ಸಿಎಂಗಳು ತುಂಬಾ ಆತ್ಮೀಯವಾಗಿ ಮಾತನಾಡಿಕೊಂಡರು.
ಬಜೆಟ್ ಗಲಾಟೆ ಬಳಿಕ ಮುಖಾಮುಖಿಯಾದ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ದಿನವಿಡಿ ಏನೂ ನಡೆದೇ ಇಲ್ಲವೇನೋ ಎಂಬಷ್ಟು ಆತ್ಮೀಯವಾಗಿ ಕೆಲಕ್ಷಣ ಮಾತನಾಡಿ ತೆರಳಿದರು. ಹಾಲಪ್ಪ ಪುತ್ರಿ ವಿವಾಹ ಸಮಾರಂಭಕ್ಕೆ ಆಗಮಿಸಿ ಅಲ್ಲಿಂದ ಹೊರಡುತ್ತಿದ್ದ ಸಿದ್ದರಾಮಯ್ಯಗೆ ಸಿ ಎಂ ಬಿಎಸ್ ಯಡಿಯೂರಪ್ಪ ಎದುರಾಗಿದ್ದಾರೆ.ಈ ಸಂದರ್ಭ ಸಿಎಂ ಮಾತನಾಡಿ, ಏನ್ ಸರ್ ನಮಗಿಂತ ಮುಂಚೆ ಹೆಂಗ್ ಬರ್ತಿರಾ ಸರ್ ನೀವು ಎಂದರು. ಅದಕ್ಕೆ ನಗುತ್ತಲೇ ಪ್ರತಿಕ್ರಿಯೆ ಕೊಟ್ಟ ಸಿದ್ದರಾಮಯ್ಯ, ಪ್ರತಿಪಕ್ಷದವರು ಯಾವಾಗಲು ಮುಂದಿರಬೇಕು ಎಂದರು. ಜೋರಾಗಿ ನಗುತ್ತಲೇ ಸಿಎಂ ಸಿದ್ದರಾಮಯ್ಯ ಭುಜದ ಮೇಲೆ ತಟ್ಟಿ ಕೈ ಕುಲುಕಿ ಮುಂದೆ ಸಾಗಿದರೆ, ಸಿದ್ದರಾಮಯ್ಯ ಸಿಎಂ ಬೆನ್ನು ತಟ್ಟಿ ಶುಭಕೋರಿ ತೆರಳಿದರು.