ಬೆಂಗಳೂರು :ಕಾಂಗ್ರೆಸ್‌ನಲ್ಲಿ ಡಿಕೆಶಿ ವರ್ಸಸ್ ಸಿದ್ದರಾಮಯ್ಯ ಕಚ್ಚಾಟ ನಡೆಯುತ್ತಿದೆ. ಇವರಿಬ್ಬರ ಜಗಳ ಈಗ ಬೀದಿಗೆ ಬಂದು ನಿಂತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಟಾಂಗ್ ನೀಡಿದರು. ಮೈಸೂರಿನಲ್ಲಿ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಸೋಲಿಸಿದವರು ಈಗಲೂ ಅವರ ಜೊತೆಯಲ್ಲೇ ಇದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಕುರಿತು ಆ ಹೇಳಿಕೆ ನೀಡಿರಬೇಕು. ಯಾಕಂದ್ರೆ, ಸಿದ್ದರಾಮಯ್ಯ ಹೇಳಿಕೆಗೆ ಮೊದಲು ಪ್ರತಿಕ್ರಿಯೆ ಕೊಟ್ಟಿದ್ದೇ ಡಿಕೆಶಿ. ಇದು ಕಾಂಗ್ರೆಸ್‌ನ ಆಂತರಿಕ ಕಚ್ಚಾಟ ಅಷ್ಟೇ.. ಎಂದರು.
ನಾವು ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಲ್ಲ, ಅದೇನಿದ್ರೂ ಹೆಚ್‌ಡಿಕೆ-ಡಿಕೆಶಿ ಕೆಲಸ - ಸಚಿವ ಆರ್ ಅಶೋಕ್ ಸಿದ್ದರಾಮಯ್ಯ ಸರಿಯಾದ ಸಿಎಂ ಆಗಿದ್ದಿದ್ದರೆ ಏಕೆ ಸೋತರು?. ಅವರ ಆಡಳಿತ ಕೆಟ್ಟದ್ದಾಗಿತ್ತು. ಆದ್ದರಿಂದಲೇ ಅವರ ಕ್ಷೇತ್ರದಲ್ಲೇ ಜನ ಅವರಿಗೆ ಮುಕ್ತಿ ಕೊಟ್ಟರು ಎಂದು ವಾಗ್ದಾಳಿ ನಡೆಸಿದರು. ಹೆಚ್‌ಡಿಕೆ ತಾಜ್ ವೆಸ್ಟ್ ಅಂಡ್ ಹೋಟೆಲ್‌ನಲ್ಲಿ ಕುಳಿತು ಸರ್ಕಾರ ನಡೆಸುತ್ತಿದ್ದರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಒಂದು ವರ್ಷ ತಾಜ್ ವೆಸ್ಟ್ ಹೋಟೆಲಿನಲ್ಲಿ ಕೂತಿದ್ದಾಗ ಸಿದ್ದರಾಮಯ್ಯರಿಗೆ ಕಣ್ಣು ಕಾಣಿಸಲಿಲ್ವಾ?.
ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ರಲ್ಲ ಆಗಲೇ ಯಾಕೆ ಈ ಪ್ರಶ್ನೆ ಕೇಳಲಿಲ್ಲ?. ಈಗ ಮೈತ್ರಿ ಸರ್ಕಾರ ಉರುಳಿದ ಮೇಲೆ ಕೇಳಿದರೇನು ಪ್ರಯೋಜನ ಎಂದರು. ಕಾಂಗ್ರೆಸ್-ಜೆಡಿಎಸ್ ಒಳ ಒಪ್ಪಂದದಿಂದ ಸೋತೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ನಾವು ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಒಳ ಒಪ್ಪಂದ ಎಲ್ಲ ಹೆಚ್‌ಡಿಕೆ, ಡಿಕೆಶಿ ಕೆಲಸ. ಯಾಕಂದ್ರೆ, ಅವರಿಗೆ ಉದ್ಯೋಗ ಇಲ್ಲ ಈಗ. ನಮಗೆ ಸರ್ಕಾರದ ಉದ್ಯೋಗ ಇದೆ, ಒಳ ಒಪ್ಪಂದ ಮಾಡ್ಕೊಳ್ಳಲ್ಲ ನಾವು ಎಂದು ಟಾಂಗ್ ನೀಡಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ ಎಂಬ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಅರುಣ್ ಸಿಂಗ್ ಅವರು ಹೇಳಿದ್ದೆಲ್ಲ ನಿಜ. ಅರುಣ್ ಸಿಂಗ್ ಹೇಳಿಕೆಗೆ ನಮ್ಮೆಲ್ಲರ ಸಮ್ಮತ ಇದೆ. ಮಂಗಳೂರು, ಬೆಂಗಳೂರು ಕೋರ್ ಕಮಿಟಿ ಸಭೆಗಳಲ್ಲೂ ಇದು ಚರ್ಚೆ ಆಗಿದೆ. ಕೋರ್ ಕಮಿಟಿ ಸಭೆಯಲ್ಲೂ ಯಡಿಯೂರಪ್ಪ ನಾಯಕತ್ವಕ್ಕೆ ಒಮ್ಮತ ಸೂಚಿಸಲಾಗಿತ್ತು. ನಾವು ಯಡಿಯೂರಪ್ಪ ನಾಯಕತ್ವದಲ್ಲೇ ಮುಂದುವರೆಯುತ್ತೇವೆ. ಜನವರಿಯಲ್ಲಿ ಸಂಪುಟ ವಿಸ್ತರಣೆ ಆಗಬಹುದು ಎಂದು ಈ ವೇಳೆ ತಿಳಿಸಿದರು.