ಬೆಂಗಳೂರು: ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿದ ರೋಗಿಗಳ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ರಾಜ್ಯ ಕಾಂಗ್ರೆಸ್ ನಾಯಕರು ಇಂದು ಚಾಮರಾಜನಗರ ಜಿಲ್ಲೆಗೆ ತೆರಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇಂದು ಬೆಳಗ್ಗೆಯೇ ಡಿಕೆಶಿ ರಸ್ತೆ ಮಾರ್ಗದ ಮೂಲಕ ಚಾಮರಾಜನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ. 10 ಗಂಟೆಗೆ ಸಿದ್ಧರಾಮಯ್ಯ ಜಕ್ಕೂರಿಗೆ ತೆರಳಿ ಅಲ್ಲಿಂದ ಹೆಲಿಕಾಫ್ಟರ್ ಮೂಲಕ ಪ್ರಯಾಣ ಬೆಳೆಸಿದ್ದಾರೆ.
ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಮೃತಪಟ್ಟ 24 ರೋಗಿಗಳ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಲಿದ್ದಾರೆ. ಇದಾದ ಬಳಿಕ ಚಾಮರಾಜನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಲಿದ್ದಾರೆ. ಆಮ್ಲಜನಕ ಕೊರತೆ ಎದುರಾಗಲು ಕಾರಣ ಹಾಗೂ ಅದಕ್ಕೆ ಕೈಗೊಳ್ಳದ ಮುನ್ನೆಚ್ಚರಿಕೆಯ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ.
ಬಂದ ನಂತರ ಮಾತನಾಡುತ್ತೇನೆ: ಚಾಮರಾಜನಗರಕ್ಕೆ ತೆರಳುವ ಮುನ್ನ ಬೆಂಗಳೂರಿನ ಶಿವಾನಂದ ವೃತ್ತ ಸಮೀಪ ಇರುವ ಸರ್ಕಾರಿ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಚಾಮರಾಜನಗರಕ್ಕೆ ಹೋಗುತ್ತಿದ್ದೇನೆ. ಬಂದ ಬಳಿಕ ಮಾತನಾಡುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ:ಆಕ್ಸಿಜನ್ ದುರಂತದ ವರದಿ ಸಲ್ಲಿಕೆಗೆ 3 ದಿನ ಅವಕಾಶ ಇದೆ, ಸದ್ಯಕ್ಕೆ ಚರ್ಚೆ ಬೇಡ: ಕಳಸದ್