ಬೆಂಗಳೂರು :ಕೆಪಿಸಿಸಿ ವಿವಿಧ ಸಮಿತಿಗಳ ರಚನೆ, ಪದಾಧಿಕಾರಿ ನೇಮಕ, ಪಕ್ಷ ಸಂಘಟನೆಗೆ ಒತ್ತು ಹಾಗೂ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾಗಿರುವ ಕಾರ್ಯಕ್ರಮಗಳ ಕುರಿತು ಹೈಕಮಾಂಡ್ ನಾಯಕರ ಜತೆ ಚರ್ಚಿಸಲು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಾಳೆ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ನಾಳೆ ಸಂಜೆ ಬೆಂಗಳೂರಿನಿಂದ ನಾಯಕರು ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಂಗಳವಾರ ಮಧ್ಯಾಹ್ನ ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ರಾಷ್ಟ್ರೀಯ ನಾಯಕರಾದ ಪ್ರಿಯಂಕಾ ಗಾಂಧಿ, ರಂದೀಪ್ ಸಿಂಗ್ ಸುರ್ಜೇವಾಲಾ, ಕೆ ಸಿ ವೇಣುಗೋಪಾಲ್ ಮುಂತಾದ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಳೆದ ತಿಂಗಳು ದಿಲ್ಲಿಗೆ ತೆರಳಿ ವರಿಷ್ಠರೊಂದಿಗೆ ಸಮಾಲೋಚಿಸಿ ವಾಪಸಾಗಿದ್ದರು. ಇದಾದ ನಂತರ ಕೆಪಿಸಿಸಿ ವಿವಿಧ ಸಮಿತಿಗಳ ರಚನೆ ಸಂಬಂಧ ಪ್ರಕ್ರಿಯೆ ಆರಂಭಿಸಿದ್ದರು. ನೇಮಕದ ವಿಚಾರದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರನ್ನೂ ವಿಶ್ವಾಸಕ್ಕೆ ಪಡೆಯುವ ನಿಟ್ಟಿನಲ್ಲಿ ಇದೀಗ ಅವರೊಂದಿಗೆ ಇನ್ನೊಮ್ಮೆ ದಿಲ್ಲಿಗೆ ಪ್ರಯಾಣ ಮಾಡುತ್ತಿದ್ದಾರೆ ಡಿಕೆಶಿ.
ಏನೇನು ಚರ್ಚೆ?:ಕಾಂಗ್ರೆಸ್ ಪಕ್ಷದ ಆಂತರಿಕ ಬಲ ವರ್ಧನೆ, ಒಳ ಬೇಗುದಿ ಶಮನ, ಕೆಪಿಸಿಸಿ ಸಮಿತಿ ಪದಾಧಿಕಾರಿಗಳ ಆಯ್ಕೆ ಸೇರಿದಂತೆ ಹಲವು ವಿಚಾರದ ಚರ್ಚೆ ನಡೆಯಲಿದೆ. ಜುಲೈ ತಿಂಗಳ ಅಂತ್ಯದೊಳಗೆ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ.
ಇದಲ್ಲದೇ 12ಕ್ಕೂ ಹೆಚ್ಚು ಜಿಲ್ಲೆಯ ಅಧ್ಯಕ್ಷರನ್ನು ಬದಲಿಸುವ, ಮುಂಚೂಣಿ ಘಟಕಗಳಿಗೆ ಅಧ್ಯಕ್ಷರ ನೇಮಕ ಸಂಬಂಧ ಚರ್ಚೆ, ಅಲ್ಪಸಂಖ್ಯಾತ, ಒಬಿಸಿ, ಮಹಿಳಾ, ಸೇವಾದಳ ಅಧ್ಯಕ್ಷರ ಬದಲಾವಣೆ ಹಾಗೂ ಹೊಸಬರ ನೇಮಕ ಸಂಬಂಧವಾಗಿ ಚರ್ಚೆ ನಡೆಯಲಿದೆ. ರಾಜ್ಯದ ಇಬ್ಬರೂ ನಾಯಕರ ಜತೆ ಚರ್ಚೆ ಹಾಗೂ ಒಮ್ಮತದ ನಿರ್ಧಾರದ ಬಳಿಕವೇ ಹೈಕಮಾಂಡ್ ಅಂತಿಮ ಪಟ್ಟಿ ಪ್ರಕಟಿಸಲಿದೆ.