ಬೆಂಗಳೂರು: ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ದುಬೈನಲ್ಲಿ ವಿಶ್ರಾಂತಿ ದಿನಗಳನ್ನು ಅನುಭವಿಸುತ್ತಿದ್ದಾರೆ. ಇನ್ನೊಂದೆಡೆ ಕ್ಷೇತ್ರದ ಹುಡುಕಾಟದಲ್ಲಿ ಸಾಕಷ್ಟು ತಲೆ ಕೆಡಿಸಿಕೊಂಡಿರುವ ಸಿದ್ದರಾಮಯ್ಯ ಮೈಸೂರಿನತ್ತ ನಾಳೆ ಪ್ರಯಾಣ ಬೆಳೆಸಲಿದ್ದಾರೆ.
2023ರ ವಿಧಾನಸಭೆ ಚುನಾವಣೆ ಕಾಂಗ್ರೆಸ್ ಪಾಲಿಗೆ ನಿರ್ಣಾಯಕ. ಇಡೀ ದೇಶದ ಪ್ರಗತಿಗೆ ಕರ್ನಾಟಕದ ಗೆಲುವು ಆಕ್ಸಿಜನ್ ಆಗಲಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ತಿಳಿಸಿದ್ದಾರೆ. ಇದು ಇಲ್ಲಿನ ನಾಯಕರಿಗೆ ಸವಾಲಿದೆ. ಮುಂದಿನ ಚುನಾವಣಾ ಸಿದ್ಧತೆಯಲ್ಲಿ ಇವರು ತೊಡಗಿಕೊಳ್ಳಬೇಕಿದ್ದು, ಕೆಲ ದಿನ ಒಂದಿಷ್ಟು ವಿಶ್ರಾಂತಿ ಪಡೆಯುವ ಜತೆಗೆ ಜಾಲಿಯಾಗಿ ಕೆಲ ದಿನ ಕಳೆದು ಬರಲು ಡಿಕೆಶಿ ದುಬೈಗೆ ತೆರಳಿದ್ದಾರೆ.
ಆಗಲೇ ಎರಡು ದಿನ ಕಳೆದಿದ್ದು, ಅಲ್ಲಿನ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಸಂತಸದ ಕ್ಷಣ ಕಳೆಯುತ್ತಿದ್ದಾರೆ. ಇವರಿಗೆ ಶಾಸಕ ಎನ್ ಎ ಹ್ಯಾರಿಸ್ ಸಾಥ್ ನೀಡಿದ್ದಾರೆ. ಡಿಸೆಂಬರ್ 8 ಕ್ಕೆ ವಾಪಸ್ ಆಗಲಿರುವ ಡಿಕೆಶಿ, ನಂತರ ಸಕ್ರಿಯವಾಗಿ ಪಕ್ಷ ಸಂಘಟನೆ, ಬಲವರ್ಧನೆ, ರಾಜ್ಯ ಪ್ರವಾಸ, ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯ ಆರಂಭಿಸಲಿದ್ದಾರೆ. ಬೆಂಗಳೂರಿಗೆ ಬಂದ ತಕ್ಷಣ ಮತ್ತೊಮ್ಮೆ ಪಕ್ಷ ಸಂಘಟನೆ ಚುರುಕು ನೀಡಲಿರುವ ಡಿ. ಕೆ ಶಿವಕುಮಾರ್ ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದೊಯ್ಯುವ ಸಂಕಲ್ಪ ತೊಟ್ಟಿದ್ದಾಗಿ ಈಗಾಗಲೇ ಹೇಳಿಕೊಂಡಿದ್ದಾರೆ.
ಕ್ಷೇತ್ರ ಸಿಗದೇ ಬಳಲಿದ ಸಿದ್ದರಾಮಯ್ಯ:ಪುತ್ರ ಡಾ. ಯತೀಂದ್ರ ಪ್ರತಿನಿಧಿಸುವ ವರುಣಾ ಬಿಟ್ಟರೆ ಸಿದ್ದರಾಮಯ್ಯಗೆ ಗೆಲ್ಲುವ ಭರವಸೆ ನೀಡುವ ಯಾವೊಂದು ಕ್ಷೇತ್ರವೂ ಕಾಣಿಸುತ್ತಿಲ್ಲ. ಇತ್ತೀಚೆಗಷ್ಟೇ ಕೋಲಾರದಿಂದ ಕಣಕ್ಕಿಳಿಯಲು ಇಚ್ಛಿಸಿದ್ದ ಸಿದ್ದರಾಮಯ್ಯ ಕ್ಷೇತ್ರವನ್ನು ಸೂಚಿಸದೇ ಮುಂದಿನ ವಿಧಾನಸಭೆ ಚುನಾವಣೆಗೆ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇದೀಗ ಕ್ಷೇತ್ರ ಹುಡುಕಾಟದಲ್ಲಿ ಬೇಸತ್ತಿರುವ ಅವರು ಮೈಸೂರಿನ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಇದೆ.