ಬೆಂಗಳೂರು :ಕೋವಿಡ್-19ನಿಂದ ರಾಜ್ಯದಲ್ಲಿ ಮೃತಪಡುವ ರೋಗಿಗಳ ಅಂಕಿ - ಅಂಶವನ್ನು ರಾಜ್ಯ ಸರ್ಕಾರ ಮುಚ್ಚಿಡುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ಈ ಗಂಭೀರ ಆರೋಪ ಮಾಡಿರುವ ಅವರು, ಕೋಲಾರದಲ್ಲಿ ಕೊರೊನಾದಿಂದ ದಿ.19ರಂದು 4 ಮತ್ತು ದಿ.20ರಂದು 1 ಸಾವು ಸಂಭವಿಸಿದೆ ಎಂದು ಅಲ್ಲಿನ ಜಾಲಪ್ಪ ಆಸ್ಪತ್ರೆ ವರದಿ ಮಾಡಿದೆ. ಆದರೆ, ಆರೋಗ್ಯ ಇಲಾಖೆ ಆ ದಿನಗಳಲ್ಲಿ ಕೊರೊನಾ ಸಾವು ಸಂಭವಿಸಿಲ್ಲ ಎಂದು ಪ್ರಕಟಣೆ ಹೊರಡಿಸಿದೆ. ಇದು ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಕೊರೊನಾ ನಿಯಂತ್ರಣದ ಪರಿ! ಎಂದು ಲೇವಡಿ ಮಾಡಿದ್ದಾರೆ.
ಕೊರೊನಾ ನಿಯಂತ್ರಣದಲ್ಲಿ ತನ್ನ ವೈಫಲ್ಯ ಮುಚ್ಚಿಡಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಾವು ಮತ್ತು ಸೋಂಕಿನ ಮಾಹಿತಿ ಬಚ್ಚಿಡುತ್ತಿದ್ದಾರೆ ಎಂಬ ಸಾರ್ವಜನಿಕರಲ್ಲಿನ ಅನುಮಾನಕ್ಕೆ ಕೋಲಾರ ಜಿಲ್ಲೆಯ ಸಾವುಗಳ ಬಗ್ಗೆ ಆರೋಗ್ಯ ಇಲಾಖೆಯ ಸುಳ್ಳುಗಳೇ ಪುರಾವೆ.
ಕೊರೊನಾ ಮಾಹಿತಿ ಕೇಳಿ ಪತ್ರದ ಮೇಲೆ ಪತ್ರ ಬರೆದ್ರೂ ಮುಖ್ಯಮಂತ್ರಿಗಳು ಮತ್ತು ಸಚಿವರು ಯಾಕೆ ಉತ್ತರಿಸುತ್ತಿಲ್ಲ ಎನ್ನುವುದನ್ನು ಕೋಲಾರದ ಸಾವಿನ ವರದಿಯಲ್ಲಿನ ಸುಳ್ಳುಗಳಿಂದ ಅರ್ಥ ಮಾಡಿಕೊಳ್ಳಬಹುದು. ಸೋಂಕು - ಸಾವಿನ ಸಂಖ್ಯೆಯನ್ನು ಬಚ್ಚಿಟ್ಟರೂ, ನೊಂದ ಕುಟುಂಬಗಳ ಶಾಪದಿಂದ ನೀವು ಪಾರಾಗಲಾರಿರಿ ಎಂದು ಅವರು ತಿಳಿಸಿದ್ದಾರೆ.
ಭ್ರಷ್ಟಾಚಾರದಿಂದಾಗಿ ಹದಗೆಟ್ಟಿರುವ ಹಣಕಾಸು ಸ್ಥಿತಿ ನಿಯಂತ್ರಿಸಲಾಗದೇ ಅನಿರ್ಬಂಧಿತವಾಗಿ ಎಲ್ಲ ವ್ಯಾಪಾರ - ವಹಿವಾಟನ್ನು ತೆರೆದು ಕೂತಿದ್ದೀರಿ. ಈಗಲೂ ಎಚ್ಚೆತ್ತು ಕೊರೊನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳದೇ ಇದ್ದರೆ ಜನರ ಶಾಪದಿಂದ ಯಾವ ಹೈಕಮಾಂಡ್ ಕೂಡ ನಿಮ್ಮನ್ನು ರಕ್ಷಿಸಲಾರದು ಎಂದು ಹೇಳಿದ್ದಾರೆ.