ಬೆಂಗಳೂರು:ಮತದಾರರ ಮಾಹಿತಿ ಅಕ್ರಮವಾಗಿ ಸಂಗ್ರಹಿಸಿರುವ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ನಾವು ದೂರು ಸಲ್ಲಿಕೆ ಮಾಡಿದ್ದು, ಈ ಸಂಬಂಧ ಕೇಂದ್ರ ಚುನಾವಣಾ ಆಯೋಗಕ್ಕೂ ಮನವಿ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೆರಳಿ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಿದ್ದಾರೆ ಎಂದರು
ಖಾಸಗಿ ಸಂಸ್ಥೆ ಮೂಲಕ ಸರ್ಕಾರ ಸಂಗ್ರಹಿಸಿರುವ ಮತದಾರರ ಖಾಸಗಿ ಮಾಹಿತಿಯನ್ನು ಕೂಡಲೇ ಚುನಾವಣಾ ಆಯೋಗ ಮುಟ್ಟುಗೋಲು ಹಾಕಿಕೊಳ್ಳಬೇಕು. ಈಗ ಖಾಸಗಿ ಸಂಸ್ಥೆ ಮೂಲಕ ನಡೆಸುತ್ತಿರುವ ಮಾಹಿತಿ ಸಂಗ್ರಹವನ್ನು ನಿಲ್ಲಿಸಿ ಹೊಸದಾಗಿ ಸರ್ಕಾರದ ಮೂಲಕವೇ ಮತದಾರರ ಮಾಹಿತಿ ಮರು ಸಂಗ್ರಹ ಮಾಡಬೇಕು. ಈ ಕುರಿತು ಬಿಬಿಎಂಪಿ ಕಮಿಷನರ್ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.